ಚೆನ್ನೈ : ನೀಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತಮಿಳುನಾಡಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಡಳಿತಾರೂಢ ಡಿಎಂಕೆ ನೀಟ್ ರದ್ದತಿ ವಿರುದ್ಧ ಹೋರಾಟ ಆರಂಭಿಸಿದೆ.ತಮಿಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಹಿನ್ನಡೆಯುಂಟಾಗುತ್ತದೆ ಎಂದು ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ರದ್ದುಗೊಳಿಸುವಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ.ಸಚಿವ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ರಾಜ್ಯಾದ್ಯಂತ ಇಂದಿನಿoದ (ಭಾನುವಾರ) ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.
ನೀಟ್ ಪರೀಕ್ಷೆ ರದ್ದತಿಗಾಗಿ ತಮಿಳುನಾಡಿನಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಜಗಂ (ಡಿಎಂಕೆ) ಪಕ್ಷ ಹೋರಾಟ ನಡೆಸುತ್ತಿದೆ. ಇದರ ವಿರುದ್ಧ ನೀಟ್ ವಿನಾಯಿತಿ-೨೦೨೨ ಮಸೂದೆಯನ್ನು ಉಭಯ ಸದನಗಳಲ್ಲಿ ಪಾಸು ಮಾಡಿ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಿದೆ. ಆದರೆ, ರಾಷ್ಟ್ರಪತಿಗಳು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಆಡಳಿತ ಪಕ್ಷವೇ ಹೋರಾಟ ನಡೆಸುತ್ತಿದೆ.
ಸಿಎಂ ಪುತ್ರನ ನೇತೃತ್ವದಲ್ಲಿ ಹೋರಾಟ: ಸಚಿವ, ಸಿಎಂ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ. ಇಂದಿನಿAದ ರಾಜ್ಯಾದ್ಯಂತ ನೀಟ್ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಇಲ್ಲಿನ ವಳ್ಳುವರ್ ಕೊಟ್ಟಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವರಾದ ದುರೈಮುರುಗನ್, ಸುಬ್ರಮಣಿಯನ್ ಮತ್ತು ಪಿ.ಕೆ.ಸೇಕರ್ ಬಾಬು ಸೇರಿದಂತೆ ಪಕ್ಷದ ಸಂಸದರು, ಶಾಸಕರು ಮತ್ತು ಚೆನ್ನೈ ಮೇಯರ್ ಕೂಡ ಭಾಗವಹಿಸಿದ್ದರು.
ಈಚೆಗೆ ನೀಟ್ ಪರೀಕ್ಷೆಯಲ್ಲಿ ವೈಫಲ್ಯ ಕಂಡ ಕಾರಣ ಆತ್ಮಹತ್ಯೆ ಮಾಡಿಕೊಂಡ ಅರಿಯಲೂರಿನ ಎಸ್.ಅನಿತಾ ಸೇರಿದಂತೆ ಪರೀಕ್ಷೆಯಿಂದ ಪ್ರಾಣ ಕಳೆದುಕೊಂಡ ವೈದ್ಯಕೀಯ ಆಕಾಂಕ್ಷಿಗಳ ಚಿತ್ರಗಳನ್ನು ಹೋರಾಟದ ವೇದಿಕೆಯ ಮೇಲೆ ಪ್ರದರ್ಶಿಸಿ, ನಮನ ಸಲ್ಲಿಸಲಾಯಿತು.
ನೀಟ್ ವಿನಾಯಿತಿ ನೀಡಲು ಆಗ್ರಹ: ಕೇಂದ್ರೀಯ ಅರ್ಹತಾ ಪರೀಕ್ಷೆಯನ್ನು ರದ್ದುಪಡಿಸುವಂತೆ ರಾಜ್ಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಕೆಲ ದಿನಗಳ ಹಿಂದೆ ವೈದ್ಯಕೀಯ ಸೀಟು ಆಕಾಂಕ್ಷಿಯೊಬ್ಬರು ಪರೀಕ್ಷೆಯಲ್ಲಿ ನಿಗದಿತ ಅಂಕ ಗಳಿಸುವಲ್ಲಿ ವಿಫಲವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪರೀಕ್ಷೆ ಗ್ರಾಮೀಣ ಪ್ರದೇಶ ಮತ್ತು ತಮಿಳು ಭಾಷಿಕ ವಿದ್ಯಾರ್ಥಿಗಳಿಗೆ ಕಠಿಣವಾಗಿದೆ. ಹೀಗಾಗಿ ರಾಜ್ಯಕ್ಕೆ ನೀಟ್ ಪರೀಕ್ಷೆಗೆ ವಿನಾಯಿತಿ ನೀಡಬೇಕು ಎಂದು ಸಚಿವ ದುರೈಮುರುಗನ್ ಒತ್ತಾಯಿಸಿದರು.
ಹಿಂದಿನ ಎಐಎಡಿಎಂಕೆ ನೇತೃತ್ವದ ಸರ್ಕಾರ ಮತ್ತು ಈಗಿನ ಡಿಎಂಕೆ ಮುಂದಾಳತ್ವದ ಸರ್ಕಾರ ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿತ್ತು. ರದ್ದತಿ ಮಸೂದೆಯನ್ನು ಪಾಸು ಮಾಡಿ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿದೆ. ಆದರೆ, ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಪದೇ ಪದೆ ಮನವಿ ಮಾಡಿದರೂ ಕೇಂದ್ರ ಸರ್ಕಾರ ನಮ್ಮ ಮನವಿಗೆ ಕಿವಿಗೊಡುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.