ದೇವರ ಮೇಲೆ ಬಾರ ಹಾಕಿ ಕಳ್ಳತನ ಮಾಡಿ, ಬಳಿಕ ದೇವರಿಗೆ ಹರಕೆ ತೀರಿಸುತ್ತಿದ್ದ ಕಳ್ಳ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸರಗಳ್ಳತನ ಮಾಡಿ ಮಲೆ ಮಹದೇಶ್ವರನ ಮೊರೆ ಹೋಗಿದ್ದ ಕಳ್ಳನ ಸಹಿತ ಇಬ್ಬರು ಖದೀಮರನ್ನು ಬೆಂಗಳೂರು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 13ರಂದು ಬೆಳಿಗ್ಗೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಶ್ಯಾಮಲಾ ಎಂಬ ವೃದ್ದೆಯ ಸರವನ್ನ ಮಂಜುನಾಥ್ ಹಾಗೂ ಯತೀಶ್ ಇಬ್ಬರು ಸೇರಿ ಎಗರಿಸಿ ಪರಾರಿಯಾಗಿದ್ದರು.
ಐಷಾರಾಮಿ ಜೀವನ ಸಾಗಿಸಲು ಆರೋಪಿಗಳು ಸರಗಳ್ಳತನ ಮಾಡುತ್ತಿದ್ದರು. ಸರಗಳ್ಳತನ ಸಕ್ಸಸ್ ಆದ್ರೆ ಮಲೆಮಹದೇಶ್ವರನ ಸನ್ನಿಧಿಗೆ ಬಂದು ಮುಡಿ ಕೊಡುವುದಾಗಿ ಆರೋಪಿ ಮಂಜುನಾಥ್ ಹರಕೆ ಹೊತ್ತಿದ್ದನಂತೆ. ಹೀಗಾಗಿ ಸರಗಳ್ಳತನ ಮಾಡಿ ನೇರವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಮಂಜುನಾಥ್ ತೆರಳಿದ್ದ, ದರ್ಶನ ಮುಗಿಸಿ ಮುಡಿಕೊಟ್ಟು ವಾಪಸಾಗುತ್ತಿದ್ದಂತೆ ಗಿರಿನಗರ ಖಾಕಿ ಪಡೆಯ ದರ್ಶನವಾಗಿದೆ.
ಆರೋಪಿಗಳು ದ್ವಿಚಕ್ರ ವಾಹನಗಳನ್ನು ಕದ್ದು, ಅದರಲ್ಲಿ ಸಂಚರಿಸಿ ಸರಗಳ್ಳತನ ಮಾಡುತ್ತಿದ್ದರು. ಬಂಧಿತರಿoದ 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗಿರಿನಗರ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.