ಬಂಟ್ವಾಳ: ಕಲ್ಲಡ್ಕದ ರಸ್ತೆ ಸಂಪೂರ್ಣವಾಗಿ ಧೂಳುಮಯವಾಗಿ ವಾಹನ ಸಂಚಾರಕ್ಕೆ ಕಾಣದಷ್ಟು ರಸ್ತೆಯಲ್ಲಿ ದಟ್ಟ ದೂಳು ತುಂಬಿಕೊoಡಿದೆ. ನಿನ್ನೆ ಮಳೆಗೆ ಈಜುಕೊಳದಂತಿದ್ದ ರಸ್ತೆ ಇಂದು ಧೂಳಿನಿಂದ ತುಂಬಿ ಹೋಗಿದೆ.
ಮಳೆಗೆ ರಸ್ತೆಯಿಲ್ಲ ಕೆಸರು ಗದ್ದೆ, ಮಳೆ ನಿಂತರೆ ದೂಳು ಡ್ರೈವಿಂಗ್ ಮಾಡದಷ್ಟು ರಸ್ತೆ ಕೆಟ್ಟದಾಗಿದೆ. ಅನಾರೋಗ್ಯದ ಬಾಗಿಲು ಬಡಿದಿದೆ, ದೂಳಿನಿಂದ ಕೆಮ್ಮು ದಮ್ಮು, ವ್ಯಾಧಿ ಬಾಧೆ ಶುರುವಾಗಿದೆ ಅನ್ನೋದು ಇಲ್ಲಿನ ಸ್ಧಳೀಯರ ಕೂಗು.. ರಸ್ತೆಯನ್ನು ಸರಿ ಮಾಡಿ ಕೊಡಿ ಎಂದು ಕಲ್ಲಡ್ಕದ ಸಾರ್ವಜನಿಕರು ಸಂಸದರಲ್ಲಿ ಮನವಿ ಮಾಡಿದಾಗ ಮರುದಿನದಿಂದಲೇ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಹೆದ್ದಾರಿ ಇಲಾಖೆಗೆ ಸೂಚನೆ ನೀಡಲಾಗಿತ್ತು.
ಇದು ಸಂಸದ ನಳಿನ್ ಕುಮಾರ್ ಕಟೀಲು ಅವರು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಜೊತೆ ಸಭೆ ನಡೆಸಿ ಸೂಚನೆ ನೀಡಿದ ಬಳಿಕ ದೂಳುಮಯ ದೃಶ್ಯ ಕಂಡು ಬಂದಿದೆ. ಅಂದರೆ ಇಲಾಖೆ ಮತ್ತು ಗುತ್ತಿಗೆದಾರರಿಗೆ ಸಂಸದರ ಮಾತಿನ ಬಿಸಿ ತಟ್ಟಿಲ್ಲ ಎಂದರ್ಥ.ಇವರ ಮಾತಿಗೆ ಕಿಮ್ಮತ್ತು ಬೆಲೆ ನೀಡಿಲ್ಲ ಎಂಬುದು ಸಾಬೀತಾಗಿದೆ.
ಗುತ್ತಿಗೆದಾರರು ಮಾಡಿದ್ದೇ ಕೆಲಸ ಹೇಳಿದ್ದೇ ಮಾತು.!
ಕಲ್ಲಡ್ಕದಲ್ಲಿ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಸಂಚಾರಕ್ಕೆ ಬದಲಿ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿಕೊಡಲಾಗಿತ್ತು. ಆದರೆ ಈ ಸರ್ವೀಸ್ ರಸ್ತೆಯನ್ನು ಕನಿಷ್ಠ ಇವರ ಕಾಮಗಾರಿ ಮುಗಿಯುವರೆಗೆ, ಅಂದರೆ ಹೆಚ್ಚು ಕಮ್ಮಿ ಮೂರು ವರ್ಷಗಳ ಅವಧಿಗೆ ಉತ್ತಮ ಗುಣಮಟ್ಟದ ಡಾಮರೀಕರಣ ಮಾಡಿಕೊಟ್ಟಿದ್ದರೆ ಈ ಅವ್ಯವಸ್ಥೆಗೆ ಅವಕಾಶವಾಗುತ್ತಿರಲಿಲ್ಲ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಮಾಡಿ, ಅದಕ್ಕೆ ಜಲ್ಲಿ ಹುಡಿ ಮಿಶ್ರಿತವಾದ ಕಚ್ಚಾ ವಸ್ತಗಳನ್ನು ಹಾಕಲಾಗುತ್ತದೆ. ಇದರಿಂದ ಮಳೆಗಾಲಕ್ಕೆ ಹೊಂಡಗುoಡಿಗಳಿoದ ರಸ್ತೆ ಸಂಚಾರಕ್ಕೆ ತೊಂದರೆಯಾದರೆ, ಮಳೆ ಕಡಿಮೆಯಾಗುತ್ತಲೆ ದೂಳಿನಿಂದ ಕಣ್ಣು ಬಿಡಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತದೆ.
ಒಂದು ರೀತಿಯಲ್ಲಿ ಜನರ ಜೀವನಕ್ಕೆ ಮತ್ತು ಸಂಚಾರಕ್ಕೆ ವಿರುದ್ದವಾದ ರೀತಿಯಲ್ಲಿ ಕಂಪೆನಿ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಸಾರ್ವಜನಿಕರಿಗೆ ಕಳೆದ ಎರಡು ವರ್ಷಗಳಿಂದ ಗರಿಷ್ಟಮಟ್ಟದ ತೊಂದರೆ ನೀಡುತ್ತಾ ವಾಹನಗಳು ಗುಜರಿಯಾಗುವಂತೆ ಮಾಡಿದ ಆರೋಪ ಕಂಪೆನಿ ಮೇಲಿದೆ.
ಕಾಮಗಾರಿ ಪೂರ್ತಿಯಾಗುವರೆಗೆ ನೀರು: ಸಂಸದ ನಳಿನ್ ಕುಮಾರ್ ಸೂಚನೆ ಕಲ್ಲಡ್ಕದ ಸಾರ್ವಜನಿಕರ ದೂರಿನಂತೆ ಇಲ್ಲಿನ ವ್ಯವಸ್ಥೆಯನ್ನು ನಾನು ಬೆಂಗಳೂರಿಗೆ ಹೋಗುವ ವೇಳೆ ಕಂಡಿದ್ದೇನೆ ಎಂದ ಸಂಸದ ನಳಿನ್ ಅವರು ಕಂಪೆನಿ ವಿರುದ್ದ ಗರಂ ಆಗಿದ್ದರು. ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ವಿರುದ್ದ ಗರಂ ಆಗಿದ್ದ ಕಟೀಲು ಅವರು ಮುಂದಿನ ದಿನಗಳಲ್ಲಿ ಅಂದರೆ ಕಾಮಗಾರಿ ಮುಗಿಯುವವರೆಗೆ ಸಾರ್ವಜನಿಕ ವಲಯದಿಂದ ಯಾವುದೇ ದೂರುಗಳು ಬರದ ರೀತಿಯಲ್ಲಿ ಕಾಮಗಾರಿಯನ್ನು ನಡೆಸಬೇಕು ಎಂಬ ಸೂಚನೆಯನ್ನು ನೀಡಿದ್ದರು. ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹೆಚ್ಚು ಜವಬ್ದಾರಿಯಿಂದ ಕೆಲಸ ನಿರ್ವಹಣೆ ಮಾಡಬೇಕು ಎಂದು ತಿಳಿಸಿದ್ದರು. ಅಲ್ಲದೆ ಕಾಮಗಾರಿ ಮುಗಿಯುವ ವರೆಗೆ ಕಲ್ಕಡ್ಕ ಕೆ.ಸಿ.ರೋಡಿನಿಂದ ಅಗತ್ಯವಿರುವವರೆಗೆ ದೂಳು ಎದ್ದೇಳದಂತೆ ನಿರಂತರವಾಗಿ ನೀರು ಹಾಯಿಸುತ್ತಿರಬೇಕು ಎಂದು ಸೂಚನೆ ನೀಡಲಾಗಿತ್ತು.
ಸಂಸದರ ಹೇಳಿದ ಮಾತು ಹೇಳಿ ಹೋದ ಮೇಲೆ ಅವರ ಹಿಂದೆಯೆ ಎದ್ದು ಹೋಗಿದೆ ಎಂದು ಕಲ್ಲಡ್ಕ ದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಅವರ ಹೇಳಿದಕ್ಕೆ ಕನಿಷ್ಠ ಒಂದು ದಿನವಾದರೂ ಇವರು ನೀರು ಹಾಕಿದ್ದರೆ ಸಾರ್ಥಕ ವಾಗುತ್ತಿತ್ತು ಎಂದು ಕಂಪೆನಿ ವಿರುದ್ದ ಆರೋಪ ಮಾಡಿದ್ದಾರೆ.