ಮೂಡುಬಿದಿರೆ: ಕಾಡಿನ ಹೂವುಗಳಂತೆ ಸಾಮಾಜಿಕ, ಆರ್ಥಿಕ ಚೈತನ್ಯವಿಲ್ಲದೇ ಬಾಡಿ ಹೋಗಬೇಕಾದ ಕರ್ಣ, ಏಕಲವ್ಯರಂತಹ ಪ್ರತಿಭೆಗಳನ್ನೂ ಪೋಷಿಸಿ ರಾಷ್ಟ್ರ ಮಾನ್ಯತೆ ದೊರಕಿಸಿದ ಶಿಕ್ಷಕರ ಸಾಲಿನಲ್ಲಿ ತಮ್ಮ ಶಿಕ್ಷಕ, ಬಂಗಬೆಟ್ಟು ಗುತ್ತು ಶತಾಯುಷಿ ಸೀತಾರಾಮ ಶೆಟ್ಟಿಯವರು ಗಮನಾರ್ಹರು. ಶಿಸ್ತು, ಸಂಯಮ,ಸದೃಡ ಮನೋಭಾವ, ಬದ್ಧತೆ, ಆತ್ಮ ಸ್ತೈರ್ಯ ಮೊದಲಾದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಶಿಲೆಯನ್ನು ಶಿಲ್ಪವಾಗಿಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು. ಅವರು ರವಿವಾರ ಸಮಾಜ ಮಂದಿರದಲ್ಲಿ ವಿದ್ಯಾರ್ಥಿಗಳು ಮತ್ತು ಅಭಿಮಾನಿಬಳಗ ಹಾಗೂ ಸಮಾಜ ಮಂದಿರ ಸಭಾ (ರಿ.) ವತಿಯಿಂದ ಜರಗಿದ ಸೀತಾರಾಮ ಶೆಟ್ಟಿ ಅವರ ಶತ ಸಂಭ್ರಮ ಆಚರಣೆಯಲ್ಲಿ ಅಭಿನಂದನಾ ಮಾತುಗಳನ್ನಾಡಿದರು.
ಗುರುವನ್ನು ಗೌರವಿಸದವರನ್ನು ಸಮಾಜವೂ ಗುರುತಿಸುವುದಿಲ್ಲ . ಈ ನಿಟ್ಟಿನಲ್ಲಿ ಶಿಕ್ಷಣ, ಜ್ಞಾನಕ್ಕಿಂತ ಸಂತೃಪ್ತಿಯ ಬದುಕು ಕಟ್ಟಿಕೊಳ್ಳುವ ವಿವೇಕ, ಕೀರ್ತಿಗಿಂತ ಬತ್ತದ ಒರತೆಯಂತೆ ನೀಡಿದ ಸ್ಫೂರ್ತಿ ತಮ್ಮೆಲ್ಲರ ಬದುಕನ್ನು ಬೆಳಗಿಸಿದೆ ಎಂದವರು ಹೇಳಿದರು.
ಹರಿದು ಬಂದ ವಿದ್ಯಾರ್ಥಿಗಳು, ಅಭಿಮಾನಿಗಳು! ಶತಾಯುಷಿ ಸೀತಾರಾಮ ಶೆಟ್ಟಿಯವರ ಶತ ಸಂಭ್ರಮಕ್ಕೆ ಅವರ ವಿದ್ಯಾರ್ಥಿಗಳು, ಅಭಿಮಾನಿಗಳು ಉತ್ಸಾಹದಿಂದ ಸೇರಿದರು. ತುಂಬಿ ತುಳುಕಿದ ಸಮಾಜ ಮಂದಿರದ ಆವರಣ ಅವರೆಲ್ಲರ ಉತ್ಸಾಹ, ಉತ್ಸವಕ್ಕೆ ಸಾಕ್ಷಿಯಾಯಿತು. ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಗುರುವಂದನೆಗೆ ಮುಗಿಬಿದ್ದ ವಿದ್ಯಾರ್ಥಿಗಳು,ಸಂಘ ಸಂಸ್ಥೆಗಳ ಪ್ರಮುಖರು, ಹಿತೈಶಿಗಳು ಸಾಲುಗಟ್ಟಿ ನಿಂತು ಗುರುವಂದನೆ ಸಲ್ಲಿಸಿದರು. ಸಹಭೋಜನ, ಆತಿಥ್ಯದ ಜತೆಗೆ ಯಕ್ಷವೈಭವ ಸಾಂಸ್ಕೃತಿಕ ಕಾರ್ಯಕ್ರಮವೂ ಶತ ಸಂಭ್ರಮಕ್ಕೆ ರಂಗೇರಿಸಿತ್ತು.