ಮಾನಸಿಕ ಅಸ್ವಸ್ಥ ಮುಸ್ಲಿಂ ಯುವತಿಯನ್ನು ಸ್ವೀಕರಿಸಲು ಒಪ್ಪದ ಕುಟುಂಬ : ವಿಶು ಶೆಟ್ಟಿ ಅವರಿಂದ ಮಂಜೇಶ್ವರದ ಆಶ್ರಮಕ್ಕೆ ದಾಖಲು : ಆಸ್ಪತ್ರೆ ವೆಚ್ಚವನ್ನೂ ಭರಿಸಿ ಮಾನವೀಯತೆ ಮೆರೆದ ಸಮಾಜಸೇವಕ – ಕಹಳೆ ನ್ಯೂಸ್
ಉಡುಪಿ : ತಮ್ಮದೇ ಕರುಳಕುಡಿ ಮಾನಸಿಕ ಅಸ್ವಸ್ಥೆಯಾಗಿ ಅನಾಥ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದರೂ, ಬಂದು ನೋಡಲೊಪ್ಪದ ಕುಟುಂಬ ಒಂದೆಡೆಯಾದರೆ, ರಕ್ತಸಂಬoಧವಿಲ್ಲದಿದ್ದರೂ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಿ ಸಾವಿರಾರು ರೂ. ಆಸ್ಪತ್ರೆಯ ವೆಚ್ಚವನ್ನು ಭರಿಸಿದಲ್ಲದೆ, ಯುವತಿಯನ್ನು ಬೀದಿ ಪಾಲಾಗಲು ಬಿಡದೆ ಮಂಜೇಶ್ವರದ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಉಡುಪಿಯ ಸಮಾಜ ಸೇವಕರ ನೈಜ ಸೇವೆ ಸಮಾಜದ ಕಣ್ತೆರೆಸುವಂತಿದೆ.
ತಿAಗಳ ಹಿಂದೆ ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಅತಿರೇಕವಾಗಿ ವರ್ತಿಸುತ್ತಿದ್ದ ಕೇರಳದ ತ್ರಿಶೂರ್ ನಿವಾಸಿ ಅಬ್ದುಲ್ ಕರೀಂ ಅವರ ಪುತ್ರಿ ಆಯೇಷಾ ಬಾನು ಅವರನ್ನು ಮಣಿಪಾಲ ಪೊಲೀಸರ ಮನವಿ ಮೇರೆಗೆ ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗ ದಾಖಲಿಸಿದ್ದರು. ಇದೀಗ ಚೇತರಿಸಿಕೊಂಡಿರುವ ಯುವತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತೆ ಆಸ್ಪತ್ರೆಯ ವೈದ್ಯರು ತಿಳಿಸಿದರೂ, ಸಂಬAಧಿಕರು ಆಕೆಯನ್ನು ಸ್ವೀಕರಿಸಲು ಒಪ್ಪದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು.
ಸಂಬAಧಪಟ್ಟ ಇಲಾಖೆಗಳು ಕೂಡಾ ಮೌನಕ್ಕೆ ಶರಣಾದಾಗ, ವಿಶು ಶೆಟ್ಟಿ ಅವರೇ ಈ ಜವಾಬ್ದಾರಿಯನ್ನು ಕೂಡಾ ತಾವೇ ಹೊತ್ತು ಆಯೇಷಾ ಬಾನು ಅವರನ್ನು ಮಂಜೇಶ್ವರ ದೈಗುಳಿಯ ಶ್ರೀಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದಾರೆ.
ಯುವತಿ ನೀಡಿದ ಮಾಹಿತಿಯಂತೆ ಆಕೆಯ ಮನೆಯವರೊಂದಿಗೆ ವಿಶು ಶೆಟ್ಟಿ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೊದಮೊದಲು ಇವತ್ತು ಬರುತ್ತೇವೆ , ನಾಳೆ ಬರುತ್ತೇವೆ ಎನ್ನುತ್ತಿದ್ದ ಅವರು, ಮುಂದೆ ನಮಗೆ ಅವಳು ಬೇಡ, ನಾವು ಬರೋದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿ ಯುವತಿಯ ಭವಿಷ್ಯದ ಮುಂದೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇರಿಸಿದ್ದರು.
ಮಾನಸಿಕ ಅಸ್ವಸ್ಥರ ಸರಕಾರಿ ಪುನರ್ವಸತಿ ಕೇಂದ್ರ ಉಡುಪಿಯಲ್ಲಿಲ್ಲದ ಕಾರಣ, ಇಲಾಖೆ ಕೂಡಾ ಮೌನ ವಹಿಸಿತ್ತು. ಪಟ್ಟು ಬಿಡದ ವಿಶು ಶೆಟ್ಟಿ ಅವರು ಯುವತಿಯ ಮುಂದಿನ ಭವಿಷ್ಯ, ಚಿಕಿತ್ಸೆ ಹಾಗೂ ಆರೈಕೆಗಾಗಿ ಮಂಜೇಶ್ವರ ಶ್ರೀ ಸಾಯಿ ಆಶ್ರಮದ ಮುಖ್ಯಸ್ಥ ಡಾ.ಉದಯ ಕುಮಾರ್ ದಂಪತಿಯನ್ನು ಸಂಪರ್ಕಿಸಿ ಯುವತಿಗೆ ಆಶ್ರಯ ನೀಡುವಂತೆ ಮನವಿ ಮಾಡಿದಾಗ, ಅವರು ಮಾನವೀಯ ನೆಲೆಯಲ್ಲಿ ಒಪ್ಪಿದ್ದಾರೆ. ತಕ್ಷಣ ವಿಶು ಶೆಟ್ಟಿ ಅವರು ಯುವತಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಮಣಿಪಾಲ ಪೊಲೀಸರ ಸಹಾಯದಿಂದ ಖಾಸಗಿ ವಾಹನದಲ್ಲಿ ಕರೆದೊಯ್ದು ಆಶ್ರಮಕ್ಕೆ ದಾಖಲಿಸಿದ್ದಾರೆ. ಇಲಾಖೆಗಳು ಮಾಡಬೇಕಾದ ಕಾರ್ಯವನ್ನು ಅವುಗಳ ಬೇಜಾವ್ದಾರಿಯ ನಡುವೆ, ವಿಶು ಶೆಟ್ಟಿ ಅವರೇ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಯುವತಿಗೆ ಆಸ್ಪತ್ರೆಯ ಚಿಕಿತ್ಸೆ, ಕ್ಯಾಂಟೀನ್ ಊಟ, ಮಂಜೇಶ್ವರಕ್ಕೆ ವಾಹನ ಬಾಡಿಗೆ ಎಲ್ಲಾ ಸೇರಿ 21,000 ರೂ,ಗಳಾಗಿದ್ದು, ಅದರಲ್ಲಿ 10,000 ರೂ.ನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಸತೀಶ್ ಶೆಟ್ಟಿ ಅಂಬಲಪಾಡಿ ಅವರು ನೀಡಿದ್ದಾರೆ. ಉಳಿದ ಮೊತ್ತವನ್ನು ವಿಶು ಶೆಟ್ಟಿ ಅವರೇ ಭರಿಸಿ ಮಾನವೀಯತೆ ಮೆರೆದಿದ್ದಾರೆ.
ಉಡುಪಿಗೆ ಮಾನಸಿಕ ಅಸ್ವಸ್ಥರ ಸರಕಾರಿ ಪುನರ್ವಸತಿ ಕೇಂದ್ರ ಪ್ರಾರಂಭ ಯಾವಾಗ ? : ಉಡುಪಿಯಲ್ಲಿ ಮಾನಸಿಕ ಅಸ್ವಸ್ಥರ ಸರಕಾರಿ ಪುನರ್ವಸತಿ ಕೇಂದ್ರವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಆಯೇಷಾ ಬಾನುವಿನಂತಹ ಪ್ರಕರಣಗಳು ಬಂದಾಗ ಅವರಿಗೆ ಎಲ್ಲಿ ಆಶ್ರಯ ಕಲ್ಪಿಸುವುದು ಎಂಬ ಗಂಭೀರ ಸಮಸ್ಯೆ ಎದುರಾಗುತ್ತಿದೆ. ಉಡುಪಿಯಲ್ಲಿ ಪುನರ್ವಸತಿ ಕೇಂದ್ರ ಆರಂಭಿಸುವAತೆ ಕಳೆದ ಒಂದೆರಡು ದಶಕಗಳಿಂದ ನಿರಂತರವಾಗಿ ಜಿಲ್ಲಾಡಳಿತ, ಇಲಾಖೆಗೆ ಮನವಿ ನೀಡಿ ನೀಡಿ ಸಾಕಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮಾನಸಿಕ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಿದವರೇ ಅವರಿಗೆ ದಿಕ್ಕು ಎಂಬ0ತಹ ಪರಿಸ್ಥಿತಿ ನಿರ್ಮಾಣವಾಗಿದೆ.ಉಡುಪಿಯಂತಹ ಬುದ್ಧಿವಂತರ ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಬಂದೊದಗಿರುವುದು ದುರಂತವೆನ್ನಬೇಕೇ ? ಯಾರನ್ನು ದೂರಬೇಕು ? ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು.