ಶತಕೋಟಿ ಭಾರತೀಯರ ಕನಸಿನ ಕೂಸಾಗಿದ್ದ ಚಂದ್ರಯಾನ-3 ಬಹುತೇಕ ಚಂದ್ರನ ಮೇಲ್ಮೈ ಸಮೀಪಕ್ಕೆ ತೆರಳಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನಂಗಳಕ್ಕೆ ತಲುಪುವ ವಿಶ್ವಾಸ ಇಮ್ಮಡಿಸಿದೆ. ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಎನಿಸಿಕೊಳ್ಳಲು ಭಾರತ ಕಾತರಗೊಂಡಿದೆ. ಅಲ್ಲದೇ ಇಡಿ ವಿಶ್ವವೇ ಇಸ್ರೋದ ಸಾಧನೆ ನೋಡಲು ಕಾತರಗೊಂಡಿದೆ.
ವಿಶ್ವದಾದ್ಯಂತ ಭಾರತದ ಚಂದ್ರಯಾನ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶ ವಾಸಿಗಳು ಕೂಡಾ ಚಂದ್ರಯಾನ – 3 ಯಶಸ್ಸಿನ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಇನ್ನು, ಎರಡೇ ದಿನಗಳಲ್ಲಿ ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ನೌಕೆ ಸಾಫ್ಟ್ ಲ್ಯಾಂಡ್ ಆಗಲಿದೆ. ಇಡಿ ಜಗತ್ತು ಭಾರತದತ್ತ ಕಣ್ಣಿಟ್ಟು ಕಾಯುತ್ತಿದೆ.
ಇದರ ನಡುವೆ ನಟ ಪ್ರಕಾಶ್ ರಾಜ್ ಚಂದ್ರಯಾನ – 3 ಕುರಿತು ವ್ಯಂಗ್ಯವಾಡಿದ್ದಾರೆ. ಚಂದ್ರನಿಂದ ಮೊದಲ ಫೋಟೋ ಎಂದು ಚಿತ್ರವೊಂದನ್ನು ಹಂಚಿಕೊಂಡಿದ್ದು ಹಲವರನ್ನು ಬೇಸರಗೊಳ್ಳುವಂತೆ ಮಾಡಿದ್ದು, ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ.
ಚಹಾ ಮಾಡುವ ವ್ಯಕ್ತಿಯೊಬ್ಬನ ವಿರೂಪಗೊಳಿಸಿದ ಫೋಟೋ ಹಂಚಿಕೊಂಡಿರುವ ಪ್ರಕಾಶ್ ರಾಜ್, ವಿಕ್ರಮ್ ಲ್ಯಾಂಡರ್ ಮೂಲಕ ಚಂದ್ರನಿಂದ ಬರುತ್ತಿರುವ ಮೊದಲ ಚಿತ್ರ ಎಂಬ ಕ್ಯಾಪ್ಷನ್ ಹಾಕಿದ್ದಾರೆ. ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದಾರೆ.