ನಕಲಿ ಸೀಲು ಸ್ಟ್ಯಾಂಪ್ ದಾಖಲೆ ಪತ್ರ ತಯಾರಿ ಪ್ರಕರಣದ ಆರೋಪಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ – ಕಹಳೆ ನ್ಯೂಸ್
ಪುತ್ತೂರು: ಗ್ರಾಮ ಪಂಚಾಯತ್ ಹಾಗೂ ನಗರಸಭೆಯ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್, ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ನೀಡುತ್ತಿದ್ದ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ವಿಶ್ವನಾಥ್ ಬಿ.ವಿ. ಅವರಿಗೆ ಜಿಲ್ಲಾ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ನೀಡಿದೆ.
ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್.ಅವರು ನೀಡಿದ ದೂರಿನಂತೆ, ಅವರ ನೇತೃತ್ವದಲ್ಲಿ ಜು.11ರಂದು ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸರು ಪಡೀಲ್ನ ಎಂ.ಎಸ್ ಕಾಂಪ್ಲೆಕ್ಸ್ ನಲ್ಲಿರುವ ಬಿ.ಬಿ.ಇಲೆಕ್ಟಿಕಲ್ಸ್ ಆಂಡ್ ಪ್ಲಂಗ್ಸ್ ಕಚೇರಿಗೆ ದಾಳಿ ನಡೆಸಿದ್ದರು.
ಆ ವೇಳೆ ಅಲ್ಲಿ, ವಿವಿಧ ಗ್ರಾ.ಪಂಗಳು ಮತ್ತು ನಗರಸಭೆಗೆ ಸಂಬಂಧಿಸಿದ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್ ಹಾಗು ನಕಲಿ ದಾಖಲೆ ಪತ್ರಗಳು ಇರುವುದು ಬೆಳಕಿಗೆ ಬಂದಿತ್ತು. ವಿಶ್ವನಾಥ ಅವರು ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಪದಲ್ಲಿ ಪೊಲೀಸರು ಬಂಧಿಸಿ, ಕಚೇರಿಯಲ್ಲಿದ್ದ ನಕಲಿ ಸೀಲು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು, ಕಚೇರಿಗೆ ಬೀಗ ಜಡಿದಿದ್ದರು.