ಪುತ್ತೂರು: ಸಂವಹನ ಕೌಶಲ್ಯ ಎಂಬುವುದು ಹುಟ್ಟಿನಿಂದ ಲಭಿಸುವುದಲ್ಲ. ಒಳ್ಳೆಯ ಸಂವಹನಕಾರ ಎಂದೆನಿಸಲು ಯಾವುದೇ ಪ್ರತಿಭೆ ಇರಬೇಕೆಂದಿಲ್ಲ. ಬದಲಾಗಿ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಅಭ್ಯಾಸದಿಂದ ಸಿದ್ಧಿಸಿಕೊಳ್ಳಬಹುದು ಎಂದು ಮಂಗಳೂರಿನ ವಿಕಾಸ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸಂವಹನ ತರಬೇತುದಾರ ಕಾರ್ತಿಕ್ ಉಪರ್ಣ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ‘ಸಂವಹನ ಕೌಶಲ್ಯ’ದ ಕುರಿತ ಉಪನ್ಯಾಸ ಕಾರ್ಯಾಗಾರವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಪ್ರಯತ್ನಿಸದೆ ಸೋಲನ್ನು ಒಪ್ಪಿಕೊಳ್ಳುವುದು ಹೇಡಿತನದ ಲಕ್ಷಣ. ಗೆಲುವನ್ನು ಸಾಧಿಸುವ ಛಲವಿದ್ದವರು ಸೋಲನ್ನು ಅಪ್ಪಿಕೊಳ್ಳಲಾರರು. ನಮ್ಮ ಪ್ರತಿ ಪ್ರಯತ್ನ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ ಎಂಬ ಆಶಾವಾದವಿರಬೇಕು. ಜೀವಂತವಾಗಿರಲು ಉಸಿರು ಹೇಗೆ ಅಗತ್ಯವೋ ಜೀವನಕ್ಕೆ ಯಶಸ್ಸು ಅಷ್ಟೇ ಅಗತ್ಯ. ಯಶಸ್ಸು ಎಂಬುವುದು ಕಾಕತಾಳೀಯವಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಶ್ರೀಧರ್ ಹೆಚ್.ಜಿ. ಮಾತನಾಡಿ, ಉಪನ್ಯಾಸಕ ಅಥವ ಇನ್ಯಾವುದೇ ಸಂವಹನ ಆಧಾರಿತ ವೃತ್ತಿಯನ್ನು ಮಾಡಲಿಚ್ಛಿಸುವವರಿಗೆ ಸಂವಹನ ಕೌಶಲ್ಯ ಬಹಳ ಮುಖ್ಯವಾಗುತ್ತದೆ. ಯಾವುದೇ ಸಂದರ್ಭವನ್ನಾಗಲೀ ತನ್ನ ಮಾತುಗಾರಿಕೆಯ ಮೂಲಕ ಸಂಭಾಳಿಸಬಹುದಾದ ಶಕ್ತಿ ಯುಕ್ತಿ ನಮಗಿರಬೇಕು. ಮಾತು ಮಾಣಿಕ್ಯವಿದ್ದಂತೆ. ನೂರು ಬಾರಿ ಯೋಚಿಸಿ ಆಡಿದ ಮಾತು, ಮಾಡಿದ ಕಾರ್ಯ ಎರಡೂ ಸಾರ್ಥಕತೆಯನ್ನು ತಂದುಕೊಡುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಸಂವಹನ ಎಂಬುವುದು ಆಂಗಿಕ ಭಾಷೆಯನ್ನೂ ಒಳಗೊಂಡಿದೆ. ಹಿಂದೆ ಸಂವಹನಕ್ಕಾಗಿ ಬಳಸುತ್ತಿದ್ದ ಸಂಜ್ಞೆಗಳು ಇಂದು ಸಂವಹನ ಮಾಧ್ಯಮದ ಪ್ರಮುಖ ಕೊಂಡಿಗಳಾಗಿ ಬದಲಾಗಿವೆ. ನಿರಂತರ ಅಭ್ಯಾಸ ಸಾಧನೆಗೆ ಅಡಿಗಲ್ಲು. ನಮ್ಮ ಓದು, ಕೇಳುವಿಕೆ, ಅರ್ಥೈಸುವಿಕೆ ನಮ್ಮನ್ನು ಉತ್ತಮ ಸಂವಹನಕಾರರನ್ನಾಗಿ ರೂಪುಗೊಳಿಸುತ್ತದೆ ಎಂದರು.
ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಪೂಜಾ ಪಕ್ಕಳ ಸ್ವಾಗತಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನನ್ಯಾ ವಿ. ವಂದಿಸಿದರು. ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ರಾಧಿಕಾ ಕಾನತ್ತಡ್ಕ ನಿರೂಪಿಸಿದರು.