ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ಕೋಪಗೊಂಡ ತಂದೆ ತನ್ನ ಮಗಳನ್ನೇ ಕೊಲೆಗೈದು, ಅಂತ್ಯಸಂಸ್ಕಾರ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ತೊಟ್ಲಿ ಗ್ರಾಮದಲ್ಲಿ ನಡೆದಿದೆ.
ರಮ್ಯಾ (19) ಕೊಲೆಯಾದ ಯುವತಿ. ತಂದೆ ವೆಂಕಟೇಶಗೌಡ ಕೊಲೆ ಆರೋಪಿ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ಯಜಾತಿಯ ಯುವಕನನ್ನು ಮಗಳು ಪ್ರೀತಿಸುತ್ತಿರುವ ಮಾಹಿತಿ ಸಿಕ್ಕ ಕೂಡಲೇ ಕುಟುಂಬಸ್ಥರು ಬುದ್ಧಿ ಹೇಳಿದ್ದಾರೆ. ಆದರೆ ರಮ್ಯಾ ಹೆತ್ತವರ ಮತು ಕೇಳಿರಲಿಲ್ಲ. ಇದರಿಂದ ಕೋಪಗೊಂಡ ತಂದೆ ಆಗಸ್ಟ್ 25ರಂದು ಮಗಳನ್ನು ಹತ್ಯೆ ಮಾಡಿದ್ದಾನೆ. ಯಾರಿಗೂ ತಿಳಿಯದಂತೆ ಕುಟುಂಬಸ್ಥರು ಅಂತ್ಯಸಂಸ್ಕಾರ ಮುಗಿಸಿದ್ದರು. ಈ ಕುರಿತು ಊರಿನಲ್ಲಿ ಗುಸುಗುಸು ಮಾತು ಶುರುವಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ವೆಂಕಟೇಶಗೌಡನನ್ನು ಕರೆದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ತಹಶೀಲ್ದಾರ್ ಹರ್ಷವರ್ಧನ್ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳಾದ ವೆಂಕಟೇಶಗೌಡ, ಮೋಹನ್, ಚೌಡೇಗೌಡ ಎಂಬವರನ್ನು ಬಂಧಿಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.