ಮಂಗಳೂರು: ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲು ಸಚಿವರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮನವಿ – ಕಹಳೆ ನ್ಯೂಸ್
ಮಂಗಳೂರು: ಕಂದಾಯ ಇಲಾಖೆಯಲ್ಲಿ ಇರುವ ಹಲವು ಸಮಸ್ಯೆಗಳನ್ನು ಬಗೆಹರಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಮಾಡಿದ್ದಾರೆ.
ಕಾವೇರಿ-2 ತಂತ್ರಾಂಶದಲ್ಲಿ ನಗರ ನಿವಾಸಿಗರಿಗೆ ಇಸಿ ಪಡೆಯಲು ಸಮಸ್ಯೆಯಾಗುತ್ತಿದ್ದು ಕೇವಲ ಒಂದೂವರೆ ತಿಂಗಳಿನ ಇಸಿ ಪಡೆಯಲು ಮಾತ್ರ ಅವಕಾಶ ಇದೆ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಬೇಕು, ಅಲ್ಲದೆ ನೋಂದಣಿ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ಹಲವು ಸಮಸ್ಯೆಗಳಾಗುತ್ತಿದ್ದು ಇದನ್ನು ತಕ್ಷಣ ಬಗೆಹರಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.
11ಇ ಸ್ಕೆಚ್ ನಲ್ಲಿ ಈಗಾಗಲೇ ಒಂದೇ ಸರ್ವೆ ನಂಬರ್ ನಲ್ಲಿ ಒಬ್ಬರ ಅರ್ಜಿ ವಿಲೇವಾರಿ ಆಗಿದ್ದರೆ, ಇನ್ನೊಬ್ಬರು ಅದೇ ಸರ್ವೆ ನಂಬರ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದನ್ನು ಸರಿಪಡಿಸಬೇಕು. ಇನ್ನು ಹಿರಿಯ ನಾಗರಿಕರಿಗೆ ಆನ್ ಲೈನ್ ಪಾವತಿ ಸಮಸ್ಯೆಯಾಗುತ್ತಿದ್ದು, ವಿಶೇಷ ಪ್ರಕರಣ ಎಂದು ಪರಿಗಣಿಸಿ ಬ್ಯಾಂಕ್ ನಲ್ಲಿ ಹಿಂದಿನಂತೆ ಅವರಿಗೆ ಚಲನ್ ಮೂಲಕ ಹಣ ಪಾವತಿಯ ವ್ಯವಸ್ಥೆಯನ್ನು ಮಾಡಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ಎಪಿಎಲ್ ಕಾರ್ಡ್ ಹೊಂದಿದ್ದ ಹಿರಿಯ ನಾಗರಿಕರ ವೇತನ, ವಿಕಲಚೇತನರ ವೇತನ, ವಿಧವಾ ವೇತನ ಸ್ಥಗಿತಗೊಳಿಸಲಾಗಿದೆ. ಇದನ್ನು ಮರು ಆರಂಭಿಸಬೇಕು. ರಾಷ್ಟ್ರೀಯ ಕುಟುಂಬ ಯೋಜನೆ ಅಡಿಯಲ್ಲಿ ಕುಟುಂಬಕ್ಕೆ ನೀಡಲಾಗುತ್ತಿದ್ದ 20,000 ರೂ ಬಿಡುಗಡೆಯಾಗದೆ ಸಮಸ್ಯೆ ಆಗುತ್ತಿದೆ. ಇದರ ಜತೆ ಪಿಂಚಣಿ ಪಡೆಯಲು ಮೂವತ್ತು ಸಾವಿರ ವಾರ್ಷಿಕ ಆದಾಯ ಮಿತಿಯನ್ನು ಒಂದು ಲಕ್ಷ ರೂ. ಗೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ವಿನಂತಿಸಲಾಯಿತು.
ಬೆಂಗರೆ ವ್ಯಾಪ್ತಿಯಲ್ಲಿ ಹಕ್ಕು ಪತ್ರ ಪಡೆಯಲು ಇನ್ನೂ ಹಲವು ಕುಟುಂಬಗಳಿಗೆ ಸಮಸ್ಯೆಯಾಗಿದ್ದು, ಏಳೆಂಟು ತಿಂಗಳ ಹಿಂದೆ ಕಂದಾಯ ಇಲಾಖೆ ಮಾಡಿರುವ ವ್ಯವಸ್ಥೆಯಂತೆ, ಸರ್ವೆ ನಂಬರ್ ಗಳನ್ನು ಹೊಸದಾಗಿ ಜೋಡಿಸಿ ಹಕ್ಕುಪತ್ರ ನೀಡುವ ವ್ಯವಸ್ಥೆಯನ್ನು ಎಲ್ಲ ಕುಟುಂಬಗಳಿಗೂ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು. ಈ ಬಗ್ಗೆ ಸಚಿವರು ಡಿಸಿಗೆ ಸ್ಥಳದಲ್ಲೇ ಸೂಚನೆ ಕೂಡಾ ನೀಡಿದರು.
ಕ್ಷೇತ್ರದಲ್ಲಿ ವಿಎ ಹಾಗೂ ಸರ್ವೆಯರ್ ಗಳ ಕೊರತೆ ಇದ್ದು ಇದರಿಂದ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದ್ದು, ಈ ಕೊರತೆಯನ್ನು ಬಗೆಹರಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಮಳೆ ಹಾನಿಗೆ ಸಂಬಂಧಪಟ್ಟಂತೆ ರಸ್ತೆ ಹಾಳಾಗಿದ್ದು, ಗುಡ್ಡ ಕುಸಿತ ಸೇರಿದಂತೆ ಹಲವು ಪ್ರಾಕೃತಿಕ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಾಮತ್ ಅವರು ಸಚಿವರಿಗೆ ಮನವಿ ಮಾಡಿದರು.