ಮಂಗಳೂರು: ಕಂಬಳ ತಡೆಯಲು ಪೆಟಾ ಮಾಡುತ್ತಿರುವುದು ಕರಾವಳಿಯ ಜನರ ಮೇಲಿನ ಮಾನಸಿಕ ಹಿಂಸೆ ಎಂದಿರುವ ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ಕಂಬಳ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಕಂಬಳ ಪ್ರಮುಖರ ಜತೆ ಚರ್ಚಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪೆಟಾ ಪ್ರಕರಣ ಅ.8ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ಕುರಿತು ಅಟಾರ್ನಿ ಜನರಲ್ ಅವರಲ್ಲಿ ಮಾತನಾಡುತ್ತೇನೆ. ಸಮರ್ಥವಾಗಿ ಕಂಬಳ ಪರವಾಗಿ ವಾದಿಸುವುದಕ್ಕೆ ಸೂಚಿಸಲಾಗುವುದು. ರಾಜ್ಯದ ವಕೀಲರೂ ಇದನ್ನು ಅನುಸರಿಸಬೇಕು ಎಂದು ಹೇಳಿದರು.
ಹಿಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಕಂಬಳ ಆತಂಕ ಎದುರಿಸುವ ಸಂದರ್ಭದಲ್ಲೂ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ. ತಮಿಳುನಾಡಿನ ಜಲ್ಲಿಕಟ್ಟುವಿಗೆ ಹೋಲಿಸಿದರೆ ಕಂಬಳದಲ್ಲಿ ಯಾವುದೇ ಹಿಂಸೆ ಇಲ್ಲ. ಇನ್ನೊಂದೆಡೆ ಕೋಣಗಳನ್ನು ತಮ್ಮ ಮಕ್ಕಳಂತೆ ಎ.ಸಿ, ಉತ್ತಮ ಪೋಷಕಾಂಶ ಆಹಾರ ನೀಡಿ ಸಲಹುತ್ತಾರೆ. ಹಾಗಿರುವಾಗ ಕಂಬಳದಲ್ಲಿ ಹಿಂಸೆ ಆಗುತ್ತಿದೆ ಎಂದು ಪದೇಪದೆ ಪೆಟಾದವರು ಹೇಳುತ್ತಾ ಕಂಬಳ ಪ್ರೇಮಿ ಕರಾವಳಿಯ ಜನರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಬಳದಲ್ಲಿ ಕೆಲವೊಂದು ನಿಯಮ ಬದಲಾವಣೆ ಮಾಡಬೇಕಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆಯಲ್ಲಿನ ಕೆಲವೊಂದು ಅಂಶಗಳು ಬದಲಾವಣೆ ಆಗಬೇಕು. ಅಂತಹ ಕೆಲವು ನಿಯಮಗಳನ್ನೇ ಎತ್ತಿಕೊಂಡು ಪೆಟಾದವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಇದನ್ನು ರಾಜ್ಯ ಸರ್ಕಾರದ ಕಾನೂನು ಸಚಿವರಲ್ಲಿ ಮಾತನಾಡುತ್ತೇನೆ. ಸೋಮವಾರ ಕೋರ್ಟ್‌ನಲ್ಲಿ ಆಗುವ ವಿಚಾರಣೆಯನ್ನು ನೋಡಿಕೊಂಡು ಮುಂದೆ ಕಾನೂನಿನಲ್ಲಿ ಬದಲಾವಣೆ ತರಲಾಗುವುದು ಎಂದರು.
ದಕ್ಷಿಣ ಕಂಬಳ ಸಮಿತಿಯ ಪಿ.ಆರ್.ಶೆಟ್ಟಿ, ಮಾಜಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ, ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಕೆ.ಪೂಜಾರಿ, ತೀರ್ಪುಗಾರ ವಲೇರಿಯನ್ ಡೆಸಾ, ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಕಂಬಳದಲ್ಲಿ ಬೆತ್ತದಿಂದ ಹೊಡೆದರೆ ಕೋಣಗಳಿಗೆ ಗಾಯ ಉಂಟಾಗುತ್ತದೆ ಎಂಬ ಆರೋಪ ಹಿನ್ನೆಲೆಯಲ್ಲಿ ಮೃದುವಾದ ಫೋಮ್ ಅಳವಡಿಸಿದ ಬೆತ್ತಗಳನ್ನು ಜಿಲ್ಲಾ ಕಂಬಳ ಸಮಿತಿ ರೂಪಿಸಿದೆ. ಕೋಣಗಳೂ ಕೆಲವೊಮ್ಮೆ ಓಡಿಸುವವರ ವಿರುದ್ಧ ತಿರುಗಿ ಬೀಳುತ್ತವೆ, ಹಾಗಾಗಿ ಓಡಿಸುವವರ ರಕ್ಷಣೆಗಾದರೂ ಬೆತ್ತ ಬೇಕಾಗುತ್ತದೆ. ಹಾಗಾಗಿ ಫೋಮ್ ಅಳವಡಿಸಿದ ಬೆತ್ತ ಬಳಕೆ ಮಾಡಲು ತಿಳಿಸಿದೆ.