ಬಂಟ್ವಾಳ: ನಾರಾಯಣ ಗುರುಗಳ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ಇಂದು ಊಹಿಸುವುದು ಕೂಡ ಅಸಾಧ್ಯದ ಮಾತು. ಆದರೆ ಯಾವುದೇ ಸಂಘರ್ಷವಿಲ್ಲದೆ ಅವರು ಇಡೀ ಸಮಾಜವನ್ನು ಜಾಗೃತಗೊಳಿಸಿದ ಕಾಯಕ ನಮ್ಮೆಲ್ಲರಿಗೂ ಆದರ್ಶವಾಗಬೇಕಿದ್ದು, ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಇಡೀ ಸಮಾಜದ ಆದರ್ಶವಾಗಿ ಸ್ವೀಕರಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಅವರು ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣಗುರು ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅವರು ಉಪನ್ಯಾಸ ನೀಡಿ, ಯುಗದ ಕಣ್ಣು ತೆರೆಸಿದ ಸಂತನಾಗಿರುವ ನಾರಾಯಣ ಗುರುಗಳು ಶೂದ್ರರಿಗಾಗಿ ದೇವಾಲಯವನ್ನು ಸ್ಥಾಪಿಸುವ ಮೂಲಕ ಆದರ್ಶರಾಗಿದ್ದು, ಸ್ವಂತಿಕೆಯ ಬೆಳವಣಿಗೆಗೆ ಪ್ರೇರಣೆ ನೀಡಿದ್ದರು ಎಂದರು.ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇನಾ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ರಾಜೇಶ್, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ರಾಷ್ಟ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ರಮೇಶ್ ನಾಯಕ್ ರಾಯಿ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್ ಉಪಸ್ಥಿತರಿದ್ದರು.
ತಾಲೂಕು ಕಚೇರಿ ಸಿಬಂದಿ ಜನಾರ್ದನ್ ಸ್ವಾಗತಿಸಿ, ಶ್ರೀಕಲಾ ಕಾರಂತ್ ವಂದಿಸಿದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು.