ಮಡಿಕೇರಿ: ಈ ವರ್ಷ ಸುರಿದ ಮಳೆ ಕೊಡಗಿನ ಮಂದಿಯನ್ನು ನಿರ್ಗತಿಕರನ್ನಾಗಿ ಮಾಡಿದಲ್ಲದೆ ಸೂರನ್ನು ಕಳೆದುಕೊಳ್ಳುವಂತೆ ಮಾಡಿದೆ. ಈ ಪ್ರಕೃತಿ ಮುನಿಸಿಗೆ ಕೊಡಗಿನ ಜನತೆಗೆ ಸಹಾಯದ ಹಸ್ತ ಹಲವಾರು ಕಡೆಗಳಿಂದ ಬಂದಿದ್ದು ಇದೀಗ ಮನೆ ಕಳೆದುಕೊಂಡವರಿಗೆ ಹೊಸ ಆಶಾಕಿರಣ ದೊರಕಿದಂತಿದೆ.
ಪ್ರಕೃತಿ ವಿಕೋಪಕ್ಕೊಳಗಾದ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ನಾಲ್ಕು ಮಾದರಿಯ ಮನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕಿಟ್ಟಿದ್ದು, ಸಂತ್ರಸ್ತರಿಗೆ ಒಪ್ಪಿಗೆಯಾಗುವ ಮಾದರಿಯ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮನೆ ನಿರ್ಮಾಣ ಮಾಡಲು ಸುರಕ್ಷಿತ ಗ್ರಾಮಗಳಾದ ಕೆ.ನಿಡುಗಣೆ, ಕಣರ್ಂಗೇರಿ, ಗಾಳಿಬೀಡು, ಮದೆ, ಬಿಳಿಗೇರಿ, ಸಂಪಾಜೆ, ಜಂಬೂರು ಗ್ರಾಮಗಳಲ್ಲಿ ಒಟ್ಟು 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಸರಿಸುಮಾರು 500ಕ್ಕೂ ಮಿಕ್ಕಿ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಒಟ್ಟಾರೆ ಸಂತ್ರಸ್ತರ ಬದುಕಿಗೆ ಆಶ್ರಯ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಒಂದು ಹಂತಕ್ಕೆ ಬರಲಿದ್ದು, ನೊಂದವರ ಕಣ್ಣುಗಳಲ್ಲಿ ಆಶಾಕಿರಣ ಕಾಣುವಂತಾಗಿದೆ.