ಉಡುಪಿ: ತಮಿಳುನಾಡಿನ ಭಕ್ತರೊಬ್ಬರು ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಚಿನ್ನಡ ಖಡ್ಗವನ್ನು ಹರಕೆ ರೂಪದಲ್ಲಿ ಅರ್ಪಿಸಿದ್ದಾರೆ. ತಮ್ಮ ಮನದ ಇಚ್ಛೆ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಅವರು 1 ಕೆಜಿ ತೂಕದ ಚಿನ್ನಡ ಖಡ್ಗವನ್ನು ಮೂಕಾಂಬಿಕೆಗೆ ಸಮರ್ಪಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಮೂಲದ ಡಾ.ನಳಿನ್ ವಿಮಲ್ ಕುಮಾರ್ ಎಂಬುವವರು ಶ್ರೀ ಮೂಕಾಂಬಿಕೆಯಲ್ಲಿ ಕೆಲದಿನಗಳ ಹಿಂದೆ ಹರಕೆ ಹೊತ್ತುಕೊಂಡಿದ್ದರು. ಹರಕೆ ಫಲಿಸಿದ ಹಿನ್ನೆಲೆಯಲ್ಲಿ ಡಾ.ನಳೀನ್ ವಿಮಲ್ ಕುಮಾರ್ 30 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಖಡ್ಗವನ್ನು ತಂದು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ.
ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಚಿನ್ನದ ಖಡ್ಗವನ್ನು ಡಾ.ನಳಿನ್ ವಿಮಲ್ ಕುಮಾರ್ ಹಸ್ತಾಂತರಿಸಿದ್ದು, ಸದ್ಯ ಖಡ್ಗವನ್ನು ದೇವಾಲಯದ ಲಾಕರ್ ನಲ್ಲಿ ಇಡಲಾಗಿದೆ. ಕೊಲ್ಲೂರು ಮೂಕಾಂಬಿಕೆಗೆ ಈವರೆಗೆ 5ಕ್ಕೂ ಹೆಚ್ಚು ಚಿನ್ನದ ದೊಡ್ಡ ಖಡ್ಗ, ಹತ್ತಾರು ಚಿನ್ನದ ಸಣ್ಣ ಖಡ್ಗ, 200ಕ್ಕೂ ಹೆಚ್ಚು ಬೆಳ್ಳಿ ಖಡ್ಗಗಳು ಹರಕೆ ರೂಪದಲ್ಲಿ ಬಂದಿವೆ.
ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆಗೆ ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ ಅವರು ನೀಡಿದ್ದ ಚಿನ್ನದ ಖಡ್ಗವನ್ನು ಶ್ರೀ ದೇವಿಯ ಅಲಂಕಾರ ಸಂದರ್ಭ ಪ್ರತಿನಿತ್ಯ ಬಳಸಲಾಗುತ್ತಿದೆ.