ಕೆಲವು ತಿಂಗಳ ಹಿಂದೆ ಗ್ರಾಹಕರನ್ನ ಕಂಗಾಲಾಗಿಸಿದ್ದ ಟೊಮೆಟೊ ಬೆಲೆ ಈಗ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ.ಹೀಗಾಗಿ ರೈತರ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಬಿದ್ದಂತಾಗಿದೆ.
ಈ ವರ್ಷದ ಜುಲೈ ತಿಂಗಳ ಮಧ್ಯಭಾಗದಲ್ಲಿ ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆ ಸೇರಿದಂತೆ ದೇಶಾದ್ಯಂತ ಟೊಮೆಟೊ ಬೆಲೆ ಕೆ.ಜಿಗೆ 200 ರಿಂದ 250 ರೂಪಾಯಿ ಇತ್ತು. ಆದ್ರೀಗ ಟೊಮೆಟೊ ದರ ಪಾತಾಳ ತಲುಪಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ರಸ್ತೆಯಲ್ಲಿ ಸುರಿದು ಆಕ್ರೋಶ ಹೊರಹಾಕುತ್ತಿದ್ದಾರೆ.
ಗುರುವಾರ ನಂದ್ಯಾಲ ಜಿಲ್ಲೆಯ ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿಗೆ 1 ರೂ. ಯಿಂದ 3 ರೂ.ಗೆ ಮಾರಾಟವಾಗುತ್ತಿತ್ತು. ವ್ಯಾಪಾರಸ್ಥರು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೂ ಇತರೆ ಪ್ರದೇಶಗಳಲ್ಲಿ ನ್ಯಾಯಯುತ ಬೆಲೆ ಇಲ್ಲದ ಕಾರಣ ಪೂರೈಕೆ ಸ್ಥಗಿತಗೊಂಡಿದೆ. ಕನಿಷ್ಠ ಸಾರಿಗೆ ಶುಲ್ಕವೂ ಸಿಗದ ಕಾರಣ ಇಲ್ಲಿನ ರೈತರು ತೀವ್ರ ಬೇಸರ ಹೊರಹಾಕುತ್ತಿದ್ದಾರೆ. ಜಿಲ್ಲೆಯ ಡೋನ್ನ ರಾಷ್ಟ್ರೀಯ ಹೆದ್ದಾರಿ ಬದಿ ಟೊಮೆಟೊ ರಾಶಿಯೇ ಕಂಡು ಬಂತು. ಸ್ಥಳೀಯರು ಚೀಲಗಳಲ್ಲಿ ಟೊಮೆಟೊ ತುಂಬಿಕೊoಡು ಹೋದರೆ, ಉಳಿದ ಬೆಳೆ ಜಾನುವಾರುಗಳಿಗೆ ತಿನ್ನಲು ನೀಡಿದ್ದಾರೆ.
ಕಣ್ಣಿರು ತರಿಸಲಿದೆ ಬೆಳ್ಳುಳ್ಳಿ..!
ಇತ್ತೀಚಿಗೆ ಕೃಷಿ ಮಾರುಕಟ್ಟೆ ತಜ್ಞರು, ಟೊಮೆಟೊ ಬೆಲೆ ಶತಕ ಬಾರಿಸಿದ ಬಳಿಕ ಈರುಳ್ಳಿ ಬೆಲೆ ಗ್ರಾಹಕರಿಗೆ ಕಣ್ಣೀರು ತರಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದರು. ಮುಂದಿನ ತಿಂಗಳ ಹೊತ್ತಿಗೆ ಈರುಳ್ಳಿ ಬೆಲೆ ದುಪ್ಟಟ್ಟಾಗಿ ಕೆ.ಜಿಗೆ 55 ರಿಂದ 60 ರೂಪಾಯಿ ತಲುಪಬಹುದು ಎಂದು ಹೇಳಿದ್ದರು. ದೇಶದಲ್ಲಿ ಅಪಾರ ಪ್ರಮಾಣದ ಈರುಳ್ಳಿ ಸಂಗ್ರಹವಿದ್ದರೂ, ಈ ವರ್ಷ ಅತಿಯಾದ ಬೇಸಿಗೆಯ ಶಾಖದಿಂದಾಗಿ ಬಹಳಷ್ಟು ಪ್ರಮಾಣದ ಈರುಳ್ಳಿ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಈರುಳ್ಳಿಯ ಬೆಲೆ ಹೆಚ್ಚಳವಾಗಬಹುದು ಎಂದು ತಜ್ಞರು ಊಹಿಸಿದ್ದರು.