Thursday, January 23, 2025
ಸುದ್ದಿ

ಮಂಗಳೂರು ವಿವಿ ಘಟಕ ಕಾಲೇಜುಗಳ ನೇಮಕಾತಿಯಲ್ಲಿ ಸ್ವಹಿತಾಸಕ್ತಿ ಮತ್ತು ಅಕ್ರಮ – ಕಹಳೆ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯು ಸ್ವಹಿತಾಸಕ್ತಿ ಮತ್ತು ಅಕ್ರಮಗಳಿಂದ ಕೂಡಿದೆ. ನೇಮಕಾತಿಯ ಸಂದರ್ಭದಲ್ಲಿ ಅರ್ಹತೆ, ಬೋಧನಾ ಅನುಭವ ಮತ್ತು ಕೌಶಲ್ಯವನ್ನು ಕಡೆಗಣಿಸಿ ಅನೇಕ ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದ ಅನೇಕ ಅತಿಥಿ ಉಪನ್ಯಾಸಕರನ್ನು ಕೈಬಿಡಲಾಗಿದೆ. ಆದುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು ಕ್ರಮವಿಡುವಂತೆ ಮಾಜಿ ಸಿಂಡಿಕೇಟ್ ಸದಸ್ಯರಾದ ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೇಮಕಾತಿಗೆ ಅಧಿಸೂಚನೆ ಹೊರಡಿಸುವಾಗ ಮೂಲ ಅರ್ಹತೆ ಸ್ನಾತಕೋತ್ತರ ಪದವಿಯೊಂದಿಗೆ ಬೋಧನಾ ಅನುಭವ, ಭಾಷಾ ಕೌಶಲ್ಯ ಮತ್ತು ನೆಟ್ (NET) ಹಾಗೂ ಕೆಸೆಟ್ (KSET) ವಿದ್ಯಾರ್ಹತೆಯನ್ನು ಪರಿಗಣಿಸುವುದಾಗಿ ಸೂಚಿಸಲಾಗಿತ್ತು. ಆದರೆ ಈ ಎಲ್ಲಾ ಅರ್ಹತೆಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಘಟಕ ಕಾಲೇಜುಗಳಲ್ಲಿ ಸೇವೆಯಲ್ಲಿದ್ದು ಬೋಧನಾ ಅನುಭವ ಇರುವ ಅನೇಕ ಅತಿಥಿ ಉಪನ್ಯಾಸಕರನ್ನು ವಿನಾ ಕಾರಣ ಕೈ ಬಿಡಲಾಗಿದೆ. ಕಾಲೇಜುಗಳಲ್ಲಿ ಇದುವರೆಗೆ ಬೋಧನಾ ಚಟುವಟಿಕೆಯೊಂದಿಗೆ ಬೋಧಕೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಇಂತಹ ಉಪನ್ಯಾಸಕರ ಜೀವನ ಅತಂತ್ರವಾಗಿದೆ. ವಿಶ್ವವಿದ್ಯಾನಿಲಯದ ಹಿತಾಸಕ್ತಿ ಹಾಗೂ ಅಭ್ಯರ್ಥಿಗಳ ವಿದ್ಯಾರ್ಹತೆಯನ್ನು ಕಡೆಗಣಿಸಿ ತಮ್ಮ ಸ್ವಹಿತಾಸಕ್ತಿಗೆ ಅನುಕೂಲವಾಗುವಂತೆ ಈ ಬಾರಿಯ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಪರಿನಿಯಮವನ್ನು ರಚಿಸದೇ ಪ್ರಭಾರ ಕುಲಪತಿಗಳು ತನ್ನ ಮೂಗಿನ ನೇರಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಈ ಬಗ್ಗೆ ಘಟಕ ಕಾಲೇಜುಗಳ ಪ್ರಾಂಶುಪಾಲರ ಅಭಿಪ್ರಾಯಗಳಿಗೂ ಮಾನ್ಯತೆ ನೀಡಿರುವುದಿಲ್ಲ. ಈ ಮೂಲಕ ಘಟಕ ಕಾಲೇಜುಗಳ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ಬದಲಾಗಿ ಅದನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಶ್ರೀ ಹರೀಶ್ ಆಚಾರ್ಯ ಅವರು ದೂರಿದ್ದಾರೆ.

ಆದುದರಿಂದ ವಿಶ್ವವಿದ್ಯಾನಿಲಯದ ಆಡಳಿತಾಂಗವು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ವಿದ್ಯಾರ್ಹತೆ ಮತ್ತು ಬೋಧನಾ ಅನುಭವ ಇದ್ದು ಅನ್ಯಾಯಕ್ಕೆ ಒಳಗಾದ ಅತಿಥಿ ಉಪನ್ಯಾಸಕರನ್ನು ಸೇವೆಗೆ ಮರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕ್ರಮ ಇರಬೇಕೆಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ