ಮಂಗಳೂರು: ನಗರ ಸ್ವಚ್ಛವಾಗಿರಬೇಕೆಂಬ ಹಿನ್ನೆಲೆಯಲ್ಲಿ ಕುದ್ರೋಳಿ ಕಸಾಯಿಖಾನೆಯನ್ನು ಆಧುನೀಕರಣಗೊಳಿಸಲು ಸಲಹೆ ನೀಡಲಾಗಿದೆ. ಆದರೆ ಬಿಜೆಪಿ ಜನಪ್ರತಿನಿಧಿಗಳು ಇದರ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಖಾದರ್ ಅವರು ಕಸಾಯಿಖಾನೆಗೆ 15 ಕೋಟಿ ರೂ. ನೀಡಿದ್ದಾರೆಂಬ ಆರೋಪದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ಜನಪ್ರತಿನಿಧಿಗಳು ಕೇಂದ್ರದ ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದು ಇದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.
2011ರಲ್ಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದಾಗ ಕುದ್ರೋಳಿ ಕಸಾಯಿಖಾನೆಯನ್ನು ಬಿಜೆಪಿ ಪರವಾಗಿರುವವರು ನಡೆಸಿದ್ದರು. ಅಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ ಎಂದು ಹೇಳಿದ್ದರು. ನಗರ ಸ್ವಚ್ಛವಾದರೆ ಸ್ವಚ್ಛ ಭಾರತ ಸಾಕಾರವಾಗುತ್ತದೆ ಎಂದು ಖಾದರ್ ತಿಳಿಸಿದರು.
ಕುದ್ರೋಳಿ ಕಸಾಯಿಖಾನೆ ಸ್ವಚ್ಛವಾಗಿದ್ದರೆ ಅಲ್ಲಿ ವಧೆಯಾಗುವ ಆಹಾರವು ಆರೋಗ್ಯವಾಗಿರಬೇಕು ಎನ್ನುವ ಉದ್ದೇಶದಿಂದ ಆಧುನೀಕರಗೊಳಿಸಲು ಸಲಹೆ ನೀಡಿದ್ದೇನೆ ಎಂದು ಅವರು ಹೇಳಿದರು.