Friday, January 24, 2025
ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಸುಧೀರ್ ಶೆಟ್ಟಿ, ಉಪಮೇಯರ್ ಆಗಿ ಸುನಿತಾ ಆಯ್ಕೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುಧೀರ್ ಶೆಟ್ಟಿ ಮೇಯರ್ ಆಗಿ ಮತ್ತು ಉಪಮೇಯರ್ ಆಗಿ ಬಿಜೆಪಿಯ ಸುನಿತಾ ಆಯ್ಕೆಯಾಗಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಮಂಗಳಾ ಸಭಾಂಗಣದಲ್ಲಿ ಚುನಾವಣಾಧಿಕಾರಿ ಮೈಸೂರು ಉಪವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಚುನಾವಣೆ ನಡೆಸಿದರು. ಈ ಅವಧಿಯ ನಾಲ್ಕನೇ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಇಬ್ಬರು ಎಸ್‍ಡಿಪಿಐ ಸದಸ್ಯರು ಇದ್ದಾರೆ. ಹಿಂದಿನ ಅವಧಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯರು ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದರು. ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಹುದ್ದೆ, ಮಂಗಳೂರು ಉತ್ತರಕ್ಕೆ ಉಪಮೇಯರ್ ಹುದ್ದೆ ಸಿಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕಾಂಗ್ರೆಸ್‍ನಿಂದ ನವೀನ್ ಆರ್.ಡಿಸೋಜ ನಾಮಪತ್ರ ಸಲ್ಲಿಸಿದ್ಧರು. ಕಾಂಗ್ರೆಸ್‍ನ ನವೀನ್ ಆರ್.ಡಿಸೋಜ ಪರವಾಗಿ 14 ಮತಗಳು, ವಿರುದ್ಧವಾಗಿ 47 ಮತಗಳು ಬಿದ್ದರೆ ಎಸ್‍ಡಿಪಿಐನ ಇಬ್ಬರು ತಟಸ್ಥರಾಗಿದ್ದರು. ಬಿಜೆಪಿಯ ಸುಧೀರ್ ಶೆಟ್ಟಿ ಪರವಾಗಿ 47 ಮತಗಳು, ವಿರುದ್ಧವಾಗಿ 14 ಮತಗಳು ಬಿದ್ದಿದ್ದು ಇಬ್ಬರು ತಟಸ್ಥರಾಗಿದ್ಧರು. ಪಾಲಿಕೆಯಲ್ಲಿ ಬಿಜೆಪಿಯ ನಿಚ್ಚಳ ಬಹುಮತ ಇದ್ದು, ಕೊಡಿಯಾಲ್‍ಬೈಲ್ ವಾರ್ಡ್ ಸದಸ್ಯ ಸುಧೀರ್ ಶೆಟ್ಟಿ ಅವರು ಮೇಯರ್ ಹುದ್ದೆಗೆ ಬಹುಮತದಿಂದ ಆಯ್ಕೆಯಾಗಿದ್ದಾರೆ. ಪಾಲಿಕೆಯಲ್ಲಿರುವ ಪರಿಶಿಷ್ಟ ಜಾತಿಯ ಏಕೈಕ ಸದಸ್ಯೆ ಪಣಂಬೂರು ವಾರ್ಡ್‍ನ ಸುನೀತಾ ಅವರು ಉಪಮೇಯರ್ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಉಪಸ್ಥಿತರಿದ್ದು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದರು. ಇದೇ ವೇಳೆ ವಿವಿಧ ಸ್ಥಾಯಿ ಸಮಿತಿಗಳಿಗೆ ನೇಮಕ ಮಾಡಲಾಯಿತು.

ಸುಧೀರ್ ಶೆಟ್ಟಿ 3ನೇ ಬಾರಿಗೆ ಪಾಲಿಕೆಗೆ ಆಯ್ಕೆಯಾದವರು. ಮುಖ್ಯ ಸಮಿತಿ ಸಚೇತಕರಾಗಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿಯಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಕಳೆದ ವರ್ಷ ಮೇಯರ್ ಚುನಾವಣೆ ವೇಳೆ ಸುಧೀರ್ ಅವರ ಹೆಸರೂ ಕೇಳಿಬಂದಿತ್ತು. ಬಿಲ್ಲವ ಸಮುದಾಯಕ್ಕೆ ಆದ್ಯತೆ ನೀಡಿದ್ದ ಬಿಜೆಪಿ, ಜಯಾನಂದ ಅಂಚನ್ ಅವರಿಗೆ ಅವಕಾಶ ಕಲ್ಪಿಸಿತ್ತು.

ಮಂಗಳೂರು ಪಾಲಿಕೆ ಚುನಾವಣೆ 2019ರ ನ.12ಕ್ಕೆ ನಡೆದಿದ್ದು ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‍ಡಿಪಿಐ 2 ಸ್ಥಾನಗಳನ್ನು ಪಡೆದಿತ್ತು. ಮೊದಲ ಅವಧಿಗೆ ಮೇಯರ್ ಆಗಿ ದಿವಾಕರ್ ಪಾಂಡೇಶ್ವರ, ಎರಡನೇ ಅವಧಿಗೆ ಪ್ರೇಮಾನಂದ ಶೆಟ್ಟಿ, ಮೂರನೇ ಅವಧಿಗೆ ಜಯಾನಂದ ಅಂಚನ್ ಆಯ್ಕೆಯಾಗಿದ್ದರು.