Saturday, November 23, 2024
ಸುದ್ದಿ

ಯೋಧರ ತ್ಯಾಗದಕಥೆ: ಪತ್ನಿಯ ಹುಟ್ಟುಹಬ್ಬಕ್ಕೆ ಕಳುಹಿಸಿದ ಸಂದೇಶ ವೈರಲ್‌ – ಕಹಳೆ ನ್ಯೂಸ್

ಸುಳ್ಯ: ಪಂಜ ಸಮೀಪದ ಕೂತ್ಕುಂಜ ಗ್ರಾಮ ಕಕ್ಯಾನ ನಿವಾಸಿ ಯೋಧ ಸುದರ್ಶನ ಗೌಡ ತನ್ನ ಪತ್ನಿ ಲಾವಣ್ಯ ಅವರ ಹುಟ್ಟುಹಬ್ಬಕ್ಕೆ ಕಳುಹಿಸಿದ ಸಂದೇಶ ಈಗ ವೈರಲ್‌ ಆಗಿದೆ.

‘ಬೇಸರಿಸಬೇಡ, ಇಲ್ಲಿ ನೆಟ್‌ವರ್ಕ್‌ ಇಲ್ಲ. 1,300 ಕಿ.ಮೀ. ದೂರ ಇದ್ದೇನೆ. 10 ದಿನ ಆಯಿತು ನೆಟ್‌ವರ್ಕ್‌ ಸಿಗುವುದೇ ದುಸ್ತರ ಎನಿಸಿದೆ. ಹಾಗಾಗಿ ನಿನ್ನ ಹುಟ್ಟುಹಬ್ಬದ ಮೊದಲೇ ಮೆಸೇಜ್‌ ಮಾಡಿರುವೆ. ಅಮ್ಮನಿಗೆ ತಿಳಿಸು, ರಜೆ ಸಿಕ್ಕರೆ ದೀಪಾವಳಿಗೆ ಬರುವೆ, ವಿಶ್‌ ಯು ಹ್ಯಾಪಿ ಬರ್ತ್‌ಡೆ…’ ಜಮ್ಮು ಕಾಶ್ಮೀರದ ಭಾರತ- ಪಾಕಿಸ್ಥಾನ ಗಡಿಭಾಗದಲ್ಲಿ ದೇಶ ಕಾಯುತ್ತಿರುವ ಯೋಧನೊಬ್ಬ ತನ್ನ ಪತ್ನಿಗೆ ಬರ್ತ್‌ಡೇ ವಿಶ್‌ ಗಾಗಿ ಕಳುಹಿಸಿದ ಫೇಸ್‌ ಬುಕ್‌ ಮೆಸೇಜ್‌ ಯೋಧರ ತ್ಯಾಗದಕಥೆಯನ್ನು ಹೇಳುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೈನಿಕರು ಕಾಯುವ ಗಡಿ ಪ್ರದೇಶದಲ್ಲಿ ನೆಟ್‌ ವರ್ಕ್‌ ಸಿಗುವುದು ಕಷ್ಟ. ಹಾಗಾಗಿ ಸೇನೆಯಿಂದ ಬೇರೆ ಫೋನ್‌ ಸೌಲಭ್ಯವನ್ನು ಕಲ್ಪಿಸಿರುತ್ತಾರೆ. ನಿಗದಿತ ಸಮಯದಲ್ಲಿ ಒಬ್ಬರ ಹಿಂದೆ ಮತ್ತೂಬ್ಬರು ಕಾಯಬೇಕಾದ ಪರಿಸ್ಥಿತಿ ಇದ್ದದ್ದೇ. ಆದರೂ ತಮ್ಮ ವೈಯಕ್ತಿಕ ಫೋನ್‌ ನಲ್ಲಿ ಕುಟುಂಬದವರಿಗೆ ಮಾತನಾಡಲು ಅವಕಾಶವಿದೆ. ಆದರೆ ಇದಕ್ಕೆ ನೆಟ್‌ ವರ್ಕ್‌ ಸಹಕರಿಸಬೇಕಷ್ಟೇ!

ಜಾಹೀರಾತು
ಜಾಹೀರಾತು
ಜಾಹೀರಾತು

ಪತಿಯ ಸಂದೇಶಕ್ಕೆ ಉತ್ತರಿಸಿದ ಲಾವಣ್ಯಾ ಸಹ, ‘ಒಂದು ತಿಂಗಳು ಆಯಿತು ನೀವು ಮಾತನಾಡಿ. ತುಂಬಾ ಭಯ ಆಗಿತ್ತು. ಈಗ ಯಾವ ಪ್ರದೇಶದಲ್ಲಿದ್ದೀರಿ?’ ಎಂದು ತಮ್ಮ ಪತಿಯ ಯೋಗಕ್ಷೇಮವನ್ನು ವಿಚಾರಿಸಿದ್ದರು.

ಉಜಿರೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸೈನ್ಯಕ್ಕೆ ಆಯ್ಕೆಗೊಂಡ ಸುದರ್ಶನ್‌, 17 ವರ್ಷಗಳಿಂದ ದೇಶವನ್ನು ಕಾಯುತ್ತಿದ್ದಾರೆ. ಒಂದೂವರೆ ತಿಂಗಳಿನಿಂದ ಗಡಿಭಾಗದಲ್ಲಿ ಸಾವಿರಾರು ಅಡಿ ಎತ್ತರದ ಪ್ರದೇಶಕ್ಕೆ ನಿಯೋಜಿತರಾಗಿದ್ದಾರೆ. ಲಾವಣ್ಯಾ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್‌ ಆಗಿದ್ದಾರೆ. ದಂಪತಿಗೆ ಒಂದು ವರ್ಷ ಎಂಟು ತಿಂಗಳ ಪ್ರಾಯದ ಪುತ್ರನಿದ್ದಾನೆ. ಸುದರ್ಶನ್‌ ಅವರ ತಾಯಿ ಹಾಗೂ ಸೋದರ ಕಕ್ಯಾನದಲ್ಲಿದ್ದಾರೆ.