ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕಾಟುಮಾವಿನ ಗಿಡವನ್ನು ನೆಡುವಂತೆ ಅರಣ್ಯ ಇಲಾಖೆಗೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಆದೇಶವನ್ನು ನೀಡಿದ್ದು ಅದರಂತೆ ಗಿಡ ನೆಡುವ ಕಾರ್ಯಕ್ಕೆ ಶಾಸಕರು ಸೆ. 10ರಂದು ಕೆಮ್ಮಾಯಿಯಲ್ಲಿ ಚಾಲನೆ ನೀಡಿದರು.
ಈ ಹಿಂದೆ ರಸ್ತೆ ಬದಿಗಳಲ್ಲಿದ್ದ ಕಾಟು ಮಾವು ಹಾಗೂ ಹಲಸಿನ ಮರಗಳನ್ನು ರಸ್ತೆ ಅಗಲೀಕರಣದ ವೇಳೆ ತೆರವುಮಾಡಲಾಗಿತ್ತು. ಹಣ್ಣಿನ ಮರಗಳನ್ನು ತೆರವು ಮಡಿದ ಬಳಿಕ ಕೆಲಸವು ಕಡೆಗಳಲ್ಲಿ ಕಾಟು ಜಾತಿಯ ಮರಗಳನ್ನು ನೆಡುವ ಕಾರ್ಯ ಇಲಾಖೆಯಿಂದ ನಡೆದಿತ್ತು.
ಈ ಬಾರಿ ಮಳೆಗಾಲದಲ್ಲಿ ಕಾಟು ಮವು ಮತ್ತು ಹಲಸಿನ ಗಿಡಗಳನ್ನು ಮಾತ್ರ ನೆಡುವಂತೆ ಅರಣ್ಯ ಇಲಾಖೆಗೆ ಶಾಸಕರು ಆದೇಶವನ್ನು ಮಾಡಿದ್ದಾರೆ. ಪುತ್ತೂರು -ಉಪ್ಪಿನಂಗಡಿ ಮುಖ್ಯ ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಶಾಸಕರು ಚಾಲನೆ ನೀಡಿದ್ದಾರೆ. ಪುತ್ತೂರಿನಿಂದ ಸೇಡಿಯಾಪು ತನಕ ಸುಮಾರು 63 ಗಿಡಗಳನ್ನು ನೆಡುವ ಕಾರ್ಯ ಪೂರ್ಣಗೊಂಡಿದೆ. ಮುಂದೆ ಮಾಣಿ- ಮೈಸೂರು ರಾ. ಹೆದ್ದಾರಿ, ಕಬಕ ವಿಟ್ಲ ರಸ್ತೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕಾಟು ಮಾವಿನ ಗಿಡವನ್ನು ನೆಡುವ ಕಾರ್ಯ ನಡೆಯಲಿದೆ. ಶಾಸಕರು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಳಿವಿನಂಚಿನಲ್ಲಿರುವ ಕಾಟುಮಾವು
ಕಾಟು ಮಾವಿನ ಮರಗಳು ಮುಖ್ಯವಾಗಿ ರಸ್ತೆ ಬದಿಗಳಲ್ಲಿ ಮತ್ತು ಕಾಡಿನಲ್ಲಿ ಮಾತ್ರ ಕಾಣಲು ಸಾಧ್ಯ. ಕಾಡಲ್ಲಿರುವ ಮರಗಳು ನಾಶವಾಗಿದೆ, ರಸ್ತೆ ಬದಿಗಳಲ್ಲಿರುವ ಮರಗಳನ್ನು ರಸ್ತೆ ಅಗಲೀಕರಣದ ವೇಳೆ ತೆರವು ಮಾಡಲಾಗಿದೆ. ಈ ಹಿಂದೆ ರಸ್ತೆ ಬದಿಗಳಲ್ಲಿದ್ದ ಮರಗಳಿಂದ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳು ದೊರೆಯುತ್ತಿದ್ದವು ಈಗ ಅಪರೂಪಕ್ಕೊಂದು ಮರಗಳನ್ನು ಮಾತ್ರ ಕಾಣಲು ಸಾಧ್ಯವಾಗಿದೆ. ಕಾಟು ಮಾವು ನಾಶವಾಗದಂತೆ ಅರಣ್ಯ ಇಲಾಖೆ ಎಚ್ಚರವಹಿಸಬೇಕು. ನೆಟ್ಟ ಗಿಡಗಳಿಗೆ ಬೇಸಿಗೆಯಲ್ಲಿ ನೀರು, ಗೊಬ್ಬರವನ್ನು ಹಾಕುವ ಮೂಲಕ ಅವುಗಳನ್ನು ಪೋಶಿಸುವ ಕೆಲಸವೂ ಇಲಾಖೆಯಿಂದ ಆಗಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು. ನಮ್ಮಲ್ಲಿ ಉತ್ತಮ ಹಣ್ಣುಗಳನ್ನು ಕಾಟು ಎಂದು ಕರೆಯುತ್ತೇವೆ, ಊರಿನ ದನಗಳನ್ನು ಕಾಟು ದನ ಎಂದು ಕರೆಯುತ್ತೇವೆ, ಯಾವುದು ಒಳ್ಳೆಯದಿದೆಯೋ ಅದನ್ನು ಕಾಟು ಎಂದು ಕರೆಯುವ ನಾವು ಕಸಿಮಾವು, ಜರ್ಸಿ ದನವನ್ನೇ ಸಾಕುವ ಹಂತಕ್ಕೆ ಬಂದಿದ್ದೇವೆ ಇದು ದುರಂತ ಎಂದು ಶಾಸಕರು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ರಸ್ತೆ ಬದಿಗಳಲ್ಲಿ ಮಾವಿನ ಗಿಡಗಳನ್ನು ನೆಡುವಂತೆ ಸೂಚನೆಯನ್ನು ನೀಡಿದ್ದೇನೆ ಎಂದು ಶಾಸಕರು ಹೇಳಿದರು.
ಶಾಸಕರ ಸೂಚನೆಯಂತೆ ಗಿಡ ನಾಟಿ: ಎಸಿಎಫ್
ಶಾಸಕರ ಸೂಚನೆಯಂತೆ ಇಲಾಖಾ ವತಿಯಿಂದ ಕಾಟು ಮಾವು ಹಾಗೂ ಹಲಸಿನ ಗಿಡಗಳನ್ನು ನೆಡುವ ಕಾರ್ಯ ಆರಂಭವಾಗಿದೆ. ಗಿಡಗಳನ್ನು ಈಗಾಗಲೇ ಸಿದ್ದಗೊಳಿಸಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆ ಬದಿಗಳಲ್ಲಿ ಗಿಡ ನಾಟಿ ಕಾರ್ಯ ನಡೆಯಲಿದೆ. ಕಾಟು ಮಾವು ಯಾರಿಗೂ ಬೇಡವಾದ ಕಾಲವಿದು ಆದರೆ ಕಾಟು ಮಾವಿಗಿಂತ ರುಚಿಯಾದ ಮಾವು ಬೇರೊಂದಿಲ್ಲ, ಅವುಗಳನ್ನು ಉಳಿಸುವ ಕಾರ್ಯಕ್ಕೆ ಶಾಸಕರು ಬೆಂಬಲ ನೀಡುತ್ತಿರುವುದು ಅಭಿನಂದನಾರ್ಹ ಎಂದು ಎಸಿಎಫ್ ಸುಬ್ಬಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ವಲಯಾರಣ್ಯಾಧಿಕಾರಿ ಕಿರಣ್ ಬಿ ವಿ,ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಆಚಾರ್ಯ, ಪ್ರಕಾಶ್ ರೈ,ಲೋಕೇಶ್ ಎಸ್ ಆರ್ , ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಉಪಸ್ತಿತರಿದ್ದರು.