Friday, September 20, 2024
ಸುದ್ದಿ

ರಾಜ್ಯಕ್ಕೆ ಮಾದರಿ ಮೆಣಸೆ ಸರ್ಕಾರಿ ಶಾಲೆ: ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲ – ಕಹಳೆ ನ್ಯೂಸ್

ಚಿಕ್ಕಮಗಳೂರು: ಇದು ಸರ್ಕಾರಿ ಶಾಲೆ ಅಂತ ಅಸಡ್ಡೆ ತೋರುವಂತಿಲ್ಲ. ಈ ಶಾಲೆಯಲ್ಲಿನ ಸೌಲಭ್ಯ ಯಾವ ಖಾಸಗಿ ಶಾಲೆಯಲ್ಲೂ ಇರೋದಿಲ್ಲ. ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡೋ ಖಾಸಗಿ ಶಾಲೆಗಳಿಗೆ ಈ ಸ್ಕೂಲು ಸೆಡ್ಡು ಹೊಡೆಯೋತ್ತಿರೋದ್ರಲ್ಲಿ ಅನುಮಾನವೇ ಇಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಒಳಗೆ ಕರೆದೊಯ್ದು ಬಿಟ್ರೆ, ಇಲ್ಲಿನ ಸೌಲಭ್ಯ ನೋಡಿ ಇದ್ಯಾವುದೋ ಹೈಟೆಕ್ ಶಾಲೆ ಇರ್ಬೇಕು, ಇಲ್ಲಿ ಫೀಸ್ ಎಷ್ಟು ಎಂತಾರೆ. ಅಸಲಿಗೆ ಅದು ಸರ್ಕಾರಿ ಶಾಲೆ. ಇದು ಮಕ್ಕಳಿಗಾಗಿ ಬಸ್ ಬಿಟ್ಟಿ ಏಕೈಕ ಸರ್ಕಾರಿ ಶಾಲೆ. ಈ ಶಾಲೆ ರಾಜ್ಯಕ್ಕಲ್ಲ, ದೇಶಕ್ಕೆ ಮಾದರಿ ಅಂದ್ರು ತಪ್ಪಿಲ್ಲ….. ಆ ಶಾಲೆ ಯಾವ್ದು, ಎಲ್ಲಿದೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ……

ಓಡಾಡೋದಕ್ಕೆ ಬಸ್. ಸುಸಜ್ಜಿತ ಕೊಠಡಿ. ಸಮೃದ್ಧ ಕ್ರೀಡಾಂಗಣ, ಸಭಾಂಗಣ ಹಾಗೂ ಗ್ರಂಥಾಲಯ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಲ್ಯಾಬ್, ಡ್ಯಾನ್ಸ್, ಯೋಗ, ಸಂಗೀತ. ಮಕ್ಕಳ ಸಮೃದ್ಧ ಜೀವನದ ಅಡಿಪಾಯಕ್ಕೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ, ಅದು ಸರ್ಕಾರಿ ಶಾಲೆಯಲ್ಲಿ ಸಿಗುತ್ತೆ ಅಂದ್ರೆ ನಿಜಕ್ಕೂ ಅದು ನಮ್ಮ ಪುಣ್ಯವೇ ಸರಿ. ಅಂತಹದ್ದೊಂದು ಹೆಗ್ಗಳಿಕೆಗೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆಯ ಸರ್ಕಾರಿ ಶಾಲೆ ಪಾತ್ರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಶೃಂಗೇರಿ ತಾಲೂಕಿನ ಎಲ್ಲಾ ಖಾಸಗಿ ಶಾಲೆಗಳಿಂತ ಈ ಸರ್ಕಾರಿ ಶಾಲೆ ಒಂದ್ ಹೆಜ್ಜೆ ಮುಂದಿದೆ. ಇಲ್ಲಿನ ಸೌಲಭ್ಯ, ಶಿಕ್ಷಣ ಕಂಡು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿದ್ದ ಪೋಷಕರು ಅಲ್ಲಿ ಬಿಡಿಸಿ ಈ ಶಾಲೆಗೆ ಸೇರಿಸಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆ ಕೂಡ ಇಲ್ಲ. ಒಂದೊಂದು ವಿಷಯಕ್ಕೆ ನುರಿತ ಶಿಕ್ಷಕರಿದ್ದು ಮಕ್ಕಳೊಂದಿಂದಿಗೆ ಮಕ್ಕಳಾಗಿ ಹೇಳಿ ಕೊಡ್ತಿದ್ದಾರೆ. ಈ ಶಾಲೆಯಂತೆ ಸೌಲಭ್ಯ, ಶಿಕ್ಷಣ ಕಂಡ ಮಕ್ಕಳು ಅವರ ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆ ಪಡ್ತಾರೆ.

ಜಾಹೀರಾತು

ಈ ಶಾಲೆಗೆ ಕೇವಲ ಮೆಣಸೆ ಸುತ್ತಮುತ್ತಲಿನ ಮಕ್ಕಳು ಮಾತ್ರವಲ್ಲದೆ 25 ಕಿ.ಮೀ. ದೂರದ ಕೊಪ್ಪ ತಾಲೂಕಿನ ಮಕ್ಕಳು ಕೂಡ ಈ ಶಾಲೆಗೆ ಬರ್ತಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಓಡಾಡೋದಕ್ಕೆ ಖಾಸಗಿ ಶಾಲೆಯಂತೆ ಬಸ್ ಬಿಡಲಾಗಿದೆ. ಸ್ಥಳಿಯರು, ಸರ್ಕಾರ ಹಾಗೂ ಶಿಕ್ಷಕರ ಪ್ರಯತ್ನದಿಂದ ಇಂದು ಈ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿದೆ. ಮಕ್ಕಳಿಗೆ ರುಚಿಕರವಾದ ಬಿಸಿಯೂಟ ನೀಡಲಿದ್ದು, ಕುಡಿಯೋಕೆ ಶುದ್ಧ ನೀರಿನ ಸೌಲಭ್ಯ ಕೂಡ ಮಾಡಲಾಗಿದೆ. ಈ ಶಾಲೆಯಲ್ಲಿ ಶಿಕ್ಷಕರು ಶಿಕ್ಷಣದ ಜೊತೆ ಪ್ರತಿಯೊಂದು ಮಕ್ಕಳ ಮೇಲೂ ಗಮನ ಹರಿಸಿ, ಅವರಿ ಇಷ್ಟವಾದ ಕ್ಷೇತ್ರದ ಬಗ್ಗೆ ವಿಶೇಷ ತರಬೇತಿ ನೀಡ್ತಿದ್ದಾರೆ. ಶಿಕ್ಷಣ, ಕ್ರೀಡೆ, ಡ್ಯಾನ್ಸ್, ಸಂಗೀತ ಹೀಗೆ ಹತ್ತು ಹಲವು ವಿಷಯಗಳ ಕುರಿತಂತೆ ಮಕ್ಕಳಿಗೆ ಇಷ್ಟವಾದ ಕ್ಷೇತ್ರದಲ್ಲೂ ತರಬೇತಿ ನೀಡ್ತಿದ್ದಾರೆ. ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯೂ ಇದೇ ರೀತಿಯಾದ್ರೆ, ಖಾಸಗಿ ಶಾಲೆಗಳು ಬಾಗಿಲು ಹಾಕೋದ್ರಲ್ಲಿ ಅನುಮಾನವಿಲ್ಲ.

ಒಟ್ಟಾರೆ, ಈಗಾಗ್ಲೇ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ ಅಂತೆಲ್ಲಾ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದ್ರು ಕಾಫಿನಾಡಲ್ಲಿ ಐದು ವರ್ಷಗಳಲ್ಲಿ 30ಕ್ಕೂ ಅಧಿಕ ಶಾಲೆಗಳು ಬಾಗಿಲು ಹಾಕಿವೆ. ಸರ್ಕಾರ ವಿವಿಧ ಯೋಜನೆಗಳನ್ನ ಜಾರಿಗೆ ತರೋ ಬದ್ಲು ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಯಲ್ಲೂ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದ್ರೆ ಬಹುಶಃ ಯಾವ ಸರ್ಕಾರಿ ಶಾಲೆಯೂ ಬಾಗಿಲು ಹಾಕೋದಿಲ್ಲ ಅನ್ಸುತ್ತೆ. ಸರ್ಕಾರ ಆ ನಿಟ್ಟಿನಲ್ಲೂ ಯೋಚಿಸಿ ಸರ್ಕಾರಿ ಶಾಲೆಗಳನ್ನ ಉಳಿಸೋದಕ್ಕೆ ಮುಂದಾಗುತ್ತಾ ಕಾದುನೋಡ್ಬೇಕು.

ಶಿವಕುಮಾರ್ ಚಿಕ್ಕಮಗಳೂರು