ಮಂಗಳೂರು: ಅಬಕಾರಿ ಸುಂಕದ ಕಡಿತ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳ ದರ ಇಳಿಕೆಯ ನಿರ್ಧಾರದಿಂದ ಲೀಟರ್‍ಗೆ 2.50 ರೂ.ನಷ್ಟು ಕಡಿತಗೊಂಡಿತ್ತು. ಆದ್ರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕೆಲವೇ ದಿನಗಳಲ್ಲಿ ಹಳೆಯ ದರವನ್ನು ದಾಟುವ ಸಾಧ್ಯತೆ ಇದೆ.
ಅಬಕಾರಿ ಸುಂಕ ಕಡಿತಗೊಳಿಸಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಪ್ರತಿದಿನ ಪರಿಷ್ಕರಣೆಯಾಗುವ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವಾಗಿಲ್ಲ.
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಘೋಷಣೆ ಮಾಡಿದ ಬಳಿಕ ರಾಜ್ಯ ಸರ್ಕಾರಗಳೂ ಅಬಕಾರಿ ಸುಂಕ ಇಳಿಕೆ ಮಾಡಬೇಕು ಎಂದು ಮನವಿ ಮಾಡಿತ್ತು. ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಇದಕ್ಕೆ ಸಹಮತ ವ್ಯಕ್ತಪಡಿಸಿ 5 ರೂ.ನಷ್ಟು ಸುಂಕ ಕಡಿತಗೊಳಿಸಿದ್ದವು.
ಇದರಿಂದ ಗ್ರಾಹಕರಿಗೆ ಕೊಂಚ ಸಮಾಧಾನವಾಗಿದ್ದರೂ, ಈಗ ದೈನಂದಿನ ತೈಲ ಪರಿಷ್ಕರಣೆಯ ಸಂದರ್ಭದಲ್ಲಿ ಬೆಲೆ ಏರಿಕೆಯಾಗುತ್ತಿದೆಯೇ ವಿನಾ ಇಳಿಕೆಯಾಗುವ ಲಕ್ಷಣ ತೋರಿಸುತ್ತಿಲ್ಲ. ಹೀಗಾಗಿ ನಿತ್ಯವೂ ತೈಲ ಬೆಲೆ ಏರಿಕೆಯಾಗುತ್ತಿದ್ದು ಇಂದೂ ಕೂಡ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.