ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ದೇಶದಲ್ಲಿ ಸರಿ ಸುಮಾರು ಎರಡು ಕೋಟಿ ಮಂದಿ ಅಡುಗೆ ಅನಿಲ ಸಬ್ಸಿಡಿ ಬಿಟ್ಟು ಕೊಟ್ಟಿದ್ದರು. ಆದರೆ, ಏರುತ್ತಿರುವ ಬೆಲೆ ಹಿನ್ನೆಲೆ ಈ ಸಬ್ಸಿಡಿಯನ್ನು ಪಡೆದುಕೊಳ್ಳಲು ಅವಕಾಶವನ್ನು ಮತ್ತೆ ಕಲ್ಪಿಸಲಾಗಿದೆ.
ಸಬ್ಸಿಡಿ ಕೈಬಿಟ್ಟ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ ಮೂಲಕವಾಗಿ ಸಬ್ಸಿಡಿ ಪುನಃ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 389 ರೂಪಾಯಿ ಹೆಚ್ಚಾಗಿದ್ದು, ಶೇ.79 ರಷ್ಟು ದುಬಾರಿಯಾಗಿದ್ದರೆ, ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 75.31 ರೂಪಾಯಿ ಹೆಚ್ಚಾದಂತಾಗಿದೆ. ದೇಶದಲ್ಲಿ 24.5 ಕೋಟಿ ಅಡುಗೆ ಅನಿಲ ಪಡೆಯುವ ಗ್ರಾಹಕರಿದ್ದು, ಈ ಪೈಕಿ 2 ಕೋಟಿ ಮಂದಿ ಸಬ್ಸಿಡಿ ಬಿಟ್ಟುಕೊಟ್ಟಿದ್ದರು.
ಸರ್ಕಾರ ಸಬ್ಸಿಡಿ ಬಿಟ್ಟುಕೊಡುವ ಅಭಿಯಾನವನ್ನೇ ಆರಂಭಿಸಿತ್ತು. ಹಾಗೆಯೇ ಹೊಸ ಗ್ರಾಹಕರು ಸಬ್ಸಿಡಿ ರಹಿತವಾಗಿ ಸಿಲಿಂಡರ್ ಪಡೆದುಕೊಳ್ಳುವ ಅವಕಾಶವನ್ನು ಆಯಿಲ್ ಕಂಪೆನಿಗಳು ಮಾಡಿಕೊಟ್ಟಿದ್ದವು.
ಜತೆಗೆ ಸಬ್ಸಿಡಿ ವರ್ಗಾವಣೆಗೆ ಆಧಾರ್ ಸಂಖ್ಯೆ ನೋಂದಣಿ ಮಾಡಿಸದವರೂ ಈ ಪಟ್ಟಿಯಲ್ಲಿ ಸೇರಿದ್ದರು. ಇದೀಗ ಸಬ್ಸಿಡಿ ಪಡೆದುಕೊಳ್ಳಲು ಎಲ್ಲರಿಗೂ ಅವಕಾಶ ನೀಡುವ ಸಂಬಂಧ ಸರ್ಕಾರದಲ್ಲಿ ಚರ್ಚೆ ನಡೆದಿದ್ದು, ಅಗತ್ಯ ಇರುವವರು ಗ್ಯಾಸ್ ಏಜೆನ್ಸಿ ಮೂಲಕ ಸಬ್ಸಿಡಿ ಪಡೆದುಕೊಳ್ಳುವ ಬಗ್ಗೆ ಪ್ರಯತ್ನ ನಡೆಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.