Sunday, November 24, 2024
ರಾಷ್ಟ್ರೀಯಸುದ್ದಿ

ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ; ಸಿಬ್ಬಂದಿಗೆ ಹೊಸ ಸಮವಸ್ತ್ರ? – ಕಹಳೆ ನ್ಯೂಸ್

ವದೆಹಲಿ, ಸೆಪ್ಟೆಂಬರ್ 13; ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವು ಸೆಪ್ಟೆಂಬರ್ 18ರಂದು ಆರಂಭವಾಗಲಿದೆ. ಈ ವಿಶೇಷ ಅಧಿವೇಶನ ಏಕೆ ಕರೆಯಲಾಗಿದೆ? ಎಂಬ ಗುಟ್ಟನ್ನು ಕೇಂದ್ರ ಸರ್ಕಾರ ಇನ್ನೂ ಬಿಟ್ಟುಕೊಟ್ಟಿಲ್ಲ. ವಿಶೇಷ ಅಧಿವೇಶನ ದೇಶದಾದ್ಯಂತ ಕುತೂಹಲ ಹುಟ್ಟು ಹಾಕಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶ್ನೋತ್ತರ ಸಮಯ ಅಥವಾ ಖಾಸಗಿ ಮಸೂದೆಯ ಮಂಡನೆ ಇಲ್ಲದೇ ಸಂಸತ್ ವಿಶೇಷ ಅಧಿವೇಶನ ಸೆಪ್ಟೆಂಬರ್ 18ರ ಸೋಮವಾರದಿಂದ 22ರ ಶುಕ್ರವಾರದ ತನಕ ನಡೆಯಲಿದೆ. ಈಗಾಗಲೇ ಈ ಕುರಿತು ಅಧಿಸೂಚನೆ ಪ್ರಕಟಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಸಂಸತ್ ಭವನದಲ್ಲಿ ನಡೆಯಲಿರುವ ಮೊದಲ ಅಧಿವೇಶನ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ವಿಶೇಷ ಅಧಿವೇಶನದಲ್ಲಿ ಸಂಸತ್‌ನ ಸಿಬ್ಬಂದಿಗಳು ಹೊಸ ಸಮವಸ್ತ್ರ ಧರಿಸಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಹೇಗಿದೆ ಹೊಸ ಸಮವಸ್ತ್ರ ಮೂಲಗಳನ್ನು ಉಲ್ಲೇಖಿಸಿ ANI ಸುದ್ದಿ ಸಂಸ್ಥೆ ಈ ಕುರಿತು ವರದಿ ಟ್ವೀಟ್ ಮಾಡಿದೆ. ಅಲ್ಲದೇ ಹೊಸ ಸಮವಸ್ತ್ರ ಹೇಗಿರಲಿದೆ? ಎಂಬ ಚಿತ್ರವನ್ನು ಸಹ ಟ್ವೀಟ್ ಮಾಡಿದೆ.

ಸಂಸತ್‌ನ ವಿವಿಧ ಸಚಿವಾಲಯಗಳ ಸಿಬ್ಬಂದಿಗಳು ಬೇರೆ-ಬೇರೆ ಬಣ್ಣದ ಸಮವಸ್ತ್ರವನ್ನು ವಿಶೇಷ ಅಧಿವೇಶನದ ಸಮಯದಲ್ಲಿ ಧರಿಸಲಿದ್ದಾರೆ. ಪುರುಷ ಸಿಬ್ಬಂದಿ ಪ್ಯಾಂಟ್, ಶರ್ಟ್, ಕೋಟ್ ಧರಿಸಲಿದ್ದಾರೆ. ಮಹಿಳಾ ಸಿಬ್ಬಂದಿಗಳು ಬೇರೆ-ಬೇರೆ ಬಣ್ಣದ ಸೀರೆ ಧರಿಸಲಿದ್ದಾರೆ.

ಶಾಸಕಾಂಗ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳು ಕ್ರಿಮ್ ಕಲರ್ ಜಾಕೆಟ್, ಗುಲಾಬಿ ಬಣ್ಣದ ಕಮಲ ಚಿನ್ಹೆಯ ಮುದ್ರಣ ಇರುವ ಕೆನೆ ಬಣ್ಣದ ಶರ್ಟ್‌ ಹಾಗೂ ಖಾಕಿ ಬಣ್ಣದ ಪ್ಯಾಂಟ್‌ ಧರಿಸಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಕಲಾಪದಲ್ಲಿ ಸಿಬ್ಬಂದಿಗಳು ಹೊಸ ಸಮವಸ್ತ್ರ ಧರಿಸಿ ಪಾಲ್ಗೊಳ್ಳಲಿದ್ದಾರೆ.

ಸಂಸತ್‌ ಭವನದಲ್ಲಿ ಕಾರ್ಯ ನಿರ್ವಹಣೆ ಮಾಡುವ 271 ಸಿಬ್ಬಂದಿಗಳಿಗೆ ಈಗಾಗಲೇ ಹೊಸ ಸಮವಸ್ತ್ರ ವಿತರಣೆ ಮಾಡಲಾಗಿದೆ. ಸಚಿವರು ಮತ್ತು ಸ್ಪೀಕರ್ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಭಂದಿಗೆ ಸಹ ಸಮವಸ್ತ್ರ ನೀಡಲಾಗಿದೆ. ಸಂಸತ್ ಭದ್ರತಾ ಸಿಬ್ಬಂದಿಗಳು ನೀಲಿ ಬಣ್ಣದ ಸಫಾರಿ ಸೂಟ್ ಬದಲು ಸೇನಾ ಸಿಬ್ಬಂದಿ ಸಮವಸ್ತ್ರದ ಮಾದರಿಯ ಬಟ್ಟೆಯನ್ನು ಧರಿಸಲಿದ್ದಾರೆ.

ಈ ಹೊಸ ಸಮವಸ್ತ್ರಗಳನ್ನು ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ ವಿನ್ಯಾಸಗೊಳಿಸಿದೆ. ಸೆಪ್ಟೆಂಬರ್ 6ರಂದು ಎಲ್ಲಾ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ. ಹೊಸ ಸಂಸತ್ ಭವನದ ಉದ್ಘಾಟನೆ ದಿನವೇ ಹೊಸ ಸಮವಸ್ತ್ರ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ.

ನವದೆಹಲಿಯಲ್ಲಿ ಜಿ 20 ಶೃಂಗಸಭೆಯ ಮುಕ್ತಾಯದ ಕೇವಲ ಒಂದು ವಾರದ ನಂತರ ಮತ್ತು 2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಕೇಂದ್ರ ಸರ್ಕಾರ ಸಂಸತ್ ವಿಶೇಷ ಅಧಿವೇಶನ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ವಿಶೇಷ ಅಧಿವೇಶನದಲ್ಲಿ ಚರ್ಚಿಸುವ ವಿಚಾರಗಳೇನು? ಎಂಬುದು ಇನ್ನೂ ಬಹಿರಂಗವಾಗಿಲ್ಲ.

 

 

ದೇಶದ ಹೆಸರು ಬದಲಾವಣೆ ಮಾಡುವುದು, ಒಂದು ದೇಶ ಒಂದು ಚುನಾವಣೆ, ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸರ್ಕಾರ ಈ ಕುರಿತು ಗುಟ್ಟು ಬಿಟ್ಟುಕೊಟ್ಟಿಲ್ಲ.

ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ವಿಶೇಷ ಅಧಿವೇಶನದ ಬಗ್ಗೆ ಟ್ವೀಟ್ ಮಾಡಿದ್ದು, ‘ಸಂಸತ್ತಿನ ವಿಶೇಷ ಅಧಿವೇಶನವನ್ನು ಸಪ್ಟೆಂಬರ್ 18 ರಿಂದ 22ರ ವರೆಗೆ ಕರೆಯಲಾಗಿದ್ದು ಒಟ್ಟು 5 ಅವಧಿಗಳು ಇರಲಿವೆ. 17ನೇ ಲೋಕಸಭೆಯ 13ನೇ ಅಧಿವೇಶನ ಹಾಗೂ ರಾಜ್ಯಸಭೆಯ 261ನೇ ಅಧಿವೇಶನ ಇದಾಗಿರಲಿದೆ. ಅಮೃತ್ ಕಾಲದ ಈ ಮಹತ್ವದ ಕಾಲಫಟ್ಟದಲ್ಲಿ ಒಂದು ರಚನಾತ್ಮಕ ಅಧಿವೇಶವನ್ನು ಮುನ್ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ.