ಪುತ್ತೂರು: ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಭಾಷಾ ಅಭಿವೃದ್ಧಿಯ ನೆಲೆಯಲ್ಲಿ ತುಳು ಲಿಪಿ ಅಧ್ಯಯನ ತರಬೇತಿ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆರಂಭಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯವೂ ಪ್ರಸ್ತುತ ವರ್ಷ ತುಳು ಎಂ.ಎ ತರಗತಿಗಳನ್ನು ಶುರು ಮಾಡಿದ್ದು, ಮುಂದಿನ ವರ್ಷ ಪದವಿ ಹಂತದಲ್ಲೂ ತುಳು ಶಿಕ್ಷಣ ಜಾರಿಗೊಳ್ಳಲು ಸಿದ್ಧತೆ ನಡೆದಿದೆ. ಕ್ರಮೇಣ ಪಿ.ಯು ಶಿಕ್ಷಣದಲ್ಲೂ ತುಳು ಆಧ್ಯಯನ ತರಭೇಕೆಂಬ ಇರಾದೆ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪರಂಪರಾ ಕೂಟ ಹಾಗೂ ತುಳು ಸಂಘದ ಸಹಯೋಗದಲ್ಲಿ ಅಕಾಡೆಮಿ ಆಯೋಜಿಸಿದ ತುಳು ಸಾಹಿತ್ಯದ ಹೊಲಬು ಬೊಕ್ಕ ತುಳು ಲಿಪಿ ಕಲ್ಪಾವು ಕಜ್ಜ ಕೊಟ್ಯ ಎಂಬ ತುಳು ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಇಂದು ವಿಶ್ವದಲ್ಲಿ ಒಂದೂವರೆ ಕೋಟಿ ತುಳು ಭಾಷಿಕರಿದ್ದಾರೆ. ವಿವಿಧ ಭಾಗಗಳಲ್ಲಿ ತುಳು ಸಾಹಿತ್ಯ ಸಮ್ಮೇಳನಗಳು ಜಾರಿಗೆ ಬರುತ್ತಿವೆ. ದೂರದ ದುಬೈಯಲ್ಲೂ ನವೆಂಬರ್ ತಿಂಗಳಲ್ಲಿ ತುಳು ಸಮ್ಮೇಳನ ನಡೆಯಲಿದೆ. ಹೀಗೆ ತುಳುವನ್ನು ಮುಖ್ಯ ನೆಲೆಗೆ ತರುವ ಪ್ರಯತ್ನ ಅನೇಕ ಕಡೆಗಳಲ್ಲಿ ಆಗುತ್ತಿರುವುದು ಸಂತಸದ ವಿಚಾರ. ಭಾಷೆಯೊಂದರ ಕಲಿಕೆ ಸಂಸ್ಕೃತಿಯ ಕಲಿಕೆಗೆ ಕಾರಣವಾಗುತ್ತದೆ. ನಮ್ಮ ಸಂಸ್ಕøತಿಯನ್ನು ತಿಳಿಯಲು ತುಳು ಭಾಷಾ ಅಧ್ಯಯನ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ತುಳು ಭಾಷೆ ಪಂಚದ್ರಾವಿಡ ಭಾಷೆಗಳಲ್ಲೊಂದು ಎಂಬ ಅಭಿದಾನಕ್ಕೆ ಪಾತ್ರವಾದರೂ ಅದರ ಪ್ರಾಚೀನತೆಗೆ ದಕ್ಕಬೇಕಾದಷ್ಟು ಗೌರವ ಇನ್ನೂ ದೊರಕಿಲ್ಲದಿರುವುದು ವಿಷಾದಕರ. ಆದರೂ ಈಗ ನಡೆಯುತ್ತಿರುವ ಪ್ರಯತ್ನಗಳು ತುಸು ತೃಪ್ತಿ ನೀಡುತ್ತಿವೆ. ಒಂದು ಕಾಲದಲ್ಲಿ ಶಾಲೆಯಲ್ಲಿ ತುಳು ಮಾತನಾಡುವುದು ಅಪರಾಧ ಎಂಬ ಭಾವವಿದ್ದರೆ ಈಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 42 ಶಾಲೆಗಳಲ್ಲಿ ತುಳು ಬೋಧನೆ ನಡೆಯುತ್ತಿದೆ. ಕಳೆದ ವರ್ಷ ಹತ್ತನೆಯ ತರಗತಿಯ ತುಳು ಪರೀಕ್ಷೆ ಬರೆದ 417 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿ ದಾಖಲೆ ನಿರ್ಮಿಸಿದರೆ ಈ ಬಾರಿ 700 ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿದ್ದಾರೆ ಎಂದು ವಿವರಿಸಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ತುಳು ಭಾಷೆ ಇನ್ನಿತರ ಭಾಷೆಯಷ್ಟೇ ಪ್ರಾಮುಖ್ಯತೆ ಪಡೆದ ಭಾಷೆ. ಹಾಗಾಗಿ ಉಳಿದ ಭಾಷೆಗೆ ದೊರಕುವ ಮನ್ನಣೆ ಇದಕ್ಕೂ ಸಿಗಬೇಕು. ಹಾಗಾಗಬೇಕಾದರೆ ಭಾಷಾ ಅಧ್ಯಯನ, ಆ ಕುರಿತ ಆಸಕ್ತಿ ವಿದ್ಯಾರ್ಥಿಗಳಲ್ಲಿ ಹೆಚ್ಚಬೇಕು. ತುಳುವನ್ನು ಕೀಳರಿಮೆಯಿಂದ ಕಾಣದೆ ಗೌರವದಿಂದ ಗುರುತಿಸುವ ಕಾರ್ಯ ಆಗಬೇಕು ಎಂದು ನುಡಿದರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ ಮಾತನಾಡಿ ಭಾಷೆಯೊಂದರ ಬೆಳವಣಿಗೆ ಅಲ್ಲಿ ಸೃಷ್ಟಿಯಾಗುವ ಸಾಹಿತ್ಯವನ್ನು ಅವಲಂಬಿಸಿದೆ. ಹಾಗಾಗಿ ತುಳುವಿನಲ್ಲಿ ದೊಡ್ಡ ಪ್ರಮಾಣದ ಸಾಹಿತ್ಯ ಕೃತಿಗಳು ಬರಬೇಕಿದೆ.
ವಿಶ್ವವಿದ್ಯಾನಿಲಯ ರೂಪಿಸುವ ತುಳು ಅಧ್ಯಯನ ವಿಭಾಗಗಳಿಗೆ ಅನುದಾನ ನೀಡುವ ಕಾರ್ಯ ಸರ್ಕಾರದಿಂದ ಜರೂರಾಗಿ ಆಗಬೇಕು. ಅಂತೆಯೇ ಅದನ್ನು ಓದಿ ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳನ್ನೂ ಕಾಣಿಸುವ ಜವಾಬ್ದಾರಿ ಇದೆ ಎಂದರಲ್ಲದೆ ಮಲೆನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಕಂಡುಬರುವ ತಾಳೆಪತ್ರಗಳಲ್ಲಿನ ತಿಕಳಾಯ್ ಲಿಪಿ ತುಳು ಎಂದೇ ಅನೇಕರು ವಾದಿಸುತ್ತಾರೆ. ಆ ಬಗೆಗಿನ ಅಧ್ಯಯನ ನಡೆದು ಅದು ತುಳು ಲಿಪಿ ಎಂದೇ ಖಚಿತವಾದರೆ ಬಹುದೊಡ್ಡ ಮಟ್ಟದ ತುಳು ಸಾಹಿತ್ಯ ಅನಾವರಣಗೊಳ್ಳುತ್ತದೆ. ಈ ಕಾರ್ಯವನ್ನು ತುಳು ಅಕಾಡೆಮಿ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ತುಳುವಿಗೆ ಹತ್ತು ಸಾವಿರ ವರ್ಷದ ಇತಿಹಾಸವಿರುವುದು ಸಂಶೋಧನೆಗಳಿಂದ ಶೃತಪಟ್ಟಿದೆ. ತುಳುವಿನಲ್ಲಿ ಸಾಕಷ್ಟು ಶಬ್ದ ಸಂಪತ್ತಿದ್ದರೂ ಅದು ಗ್ರಂಥಸ್ಥ ಭಾಷೆಯಾಗದೆ ಕೇವಲ ಕಂಠಸ್ಥ ಭಾಷೆಯಾಗಿಯೇ ಉಳಿದಿರುವುದು ಖೇದಕರ. ಹಾಗಾಗಿ ತುಳುವಿನಲ್ಲಿ ಬರೆಯುವ ಕಾರ್ಯ ಆಗಬೇಕು. ಅಂತೆಯೇ ತುಳುವಿನಲ್ಲಿ ಈಗಾಗಲೇ ಬಂದು ಉಪಲಬ್ಧವಿರುವ ಕೃತಿಗಳು ಇಂಗ್ಲಿಷ್ ಗೆ ಭಾಷಾಂತರ ಆಗಬೇಕು. ಆಗ ಅದರ ಮಹತ್ವ ಲೋಕಕ್ಕೆ ಅರ್ಥವಾಗುತ್ತದೆ ಎಂದರಲ್ಲದೆ ಕರ್ನಾಟಕದಲ್ಲಿ ಕನ್ನಡದೊಂದಿಗೆ ತುಳುವನ್ನೂ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಬೇಕು. ಹೀಗೆ ಎರಡೆರಡು ಭಾಷೆಯನ್ನು ಅಧಿಕೃತಗೊಳಿಸಿದ ಹಲವು ರಾಜ್ಯಗಳು ನಮ್ಮ ದೇಶದಲ್ಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ, ಸದಸ್ಯ ಸಂಚಾಲಕ ನಿರಂಜನ ರೈ ಮಠಂತಬೆಟ್ಟು ಶುಭ ಹಾರೈಸಿದರು. ಮಂಗಳೂರಿನ ಕೆ.ಟಿ.ಸಿ ಯ ಪತ್ರಾಗಾರ ಸಹಾಯಕ್ ಬೆನೆಟ್ ಜಿ ಅಮ್ಮನ್ನ, ಪರಂಪರಾ ಕೂಟದ ಸಂಯೋಜಕ ಡಾ.ಶ್ರೀಧರ ನಾಯ್ಕ್ ವೇದಿಕೆಯಲ್ಲಿ ಹಾಜರಿದ್ದರು.
ಕಾಲೇಜಿನ ತುಳು ಸಂಘದ ಅಧ್ಯಕ್ಷ ರೋಹಿತ್ ಸ್ವಾಗತಿಸಿ, ವಿದ್ಯಾರ್ಥಿನಿ ಮೇಘನ ವಂದಿಸಿದರು. ವಿದೈಆರ್ಥಿ ಶ್ರೀಕಾಂತ್ ಕಾರ್ಯಕ್ರಮ ನಿರ್ವಹಿಸಿದರು.