ಕಡಬ ತಾಲೂಕಿನ ಅಲಂಕಾರು ಕೃಷಿಪತ್ತಿನ ಸಹಕಾರ ಸಂಘದ ಕೊಯಿಲ ಶಾಖೆಗೆ ಸರಬರಾಜು ಆಗಿರುವ ಅಕ್ಕಿ ಕಳಪೆಯಾಗಿದ್ದು ಅಕ್ಕಿಯಲ್ಲಿ ನಿರುಪಯುಕ್ತ ವಸ್ತುಗಳು ಕಂಡು ಬಂದಿದೆ.
ಅಲoಕಾರಿನಲ್ಲಿರುವ ಆಹಾರ ಇಲಾಖೆಯ ಗೋದಾಮಿನಿಂದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತುಂಬಿಸಿದ್ದ 300 ಅಕ್ಕಿ ಮೂಟೆ ಕೊಯಿಲ ಪಡಿತರ ವಿಭಾಗಕ್ಕೆ ಸೋಮವಾರ ಸರಬರಾಜು ಆಗಿದೆ. ಬುಧವಾರ ಬೆಳಿಗ್ಗೆ ಪಡಿತರ ವಿತರಿಸಲು ಚೀಲ ತೆರೆದಾಗ 4 ಗೋಣಿ ಚೀಲದಲ್ಲಿ ಹುಣಸೆ ಬೀಜ, ಪ್ಲಾಸ್ಟಿಕ್ ಲಕೋಟೆಯಲ್ಲಿ ತುಂಬಿದ ಕೆಂಪು ಕಲ್ಲು, ಗೋದಿ ಮಿಶ್ರಣದ ದೇವರ ಪ್ರಸಾದ ರೀತಿಯಲ್ಲಿರುವ ವಸ್ತುಗಳು ಇರುವುದು ಕಂಡುಬoದಿವೆ. ಗುರುವಾರ ಮತ್ತೆ ಒಂದು ಚೀಲದಲ್ಲಿ ಇಂಥದೇ ವಸ್ತುಗಳು ಪತ್ತೆಯಾಗಿದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ :
ಕಡಬ ತಾಲೂಕು ಆಹಾರ ನಿರೀಕ್ಷಕ ಶಂಕರ್, ಆಹಾರ ಇಲಾಖೆಯ ಗೋದಾಮು ವ್ಯವಸ್ಥಾಪಕ ಚಂದ್ರಹಾಸ, ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಧರ್ಮಪಾಲ ರಾವ್, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ, ರಾಮಕುಂಜ ಗ್ರಾಮ ಪಂಚಾಯತಿನ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಈ ಸಂದರ್ಭದಲ್ಲಿ ಇದ್ದರು.
ಕೊಯಿಲ ನ್ಯಾಯ ಬೆಲೆ ಅಂಗಡಿಗೆ ಸರಬರಾಜು ಆಗಿರುವ ಕಳಪೆ ಅಕ್ಕಿಯನ್ನು ವಿತರಿಸದೆ ಗುಣಮಟ್ಟದ ಅಕ್ಕಿಯನ್ನು ಮಾತ್ರ ವಿತರಿಸಲು ಸೂಚಿಸಲಾಗಿದೆ. ಕಳಪೆ ಅಕ್ಕಿ, ಮೂಟೆಯನ್ನು ವಾಪಸ್ ಕಳಿಸಲಾಗುವುದು. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಅಲ್ಲದೆ ವರದಿಯನ್ನು ಸಲ್ಲಿಸಲಾಗುವುದು ಎಂದು ಕಡಬ ಆಹಾರ ನಿರೀಕ್ಷಕ ಎಂ.ಎಲ್ ಶಂಕರ ತಿಳಿಸಿದ್ದಾರೆ.