Friday, January 24, 2025
ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕೀಯ ನಾಯಕರು – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಷ್ಟ್ರಪತಿ ದೌಪದಿ ಮುರ್ಮು, ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ದೂರದೃಷ್ಟಿ ಮತ್ತು ದೃಢ ನಾಯಕತ್ವದಿಂದ ‘ಅಮೃತ ಕಾಲ’ದಲ್ಲಿ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತೀರಿ ಎಂದು ಬಯಸುತ್ತೇನೆ. ನೀವು ಯಾವಾಗಲೂ ಆರೋಗ್ಯವಂತ ಮತ್ತು ಸಂತೋಷದಿಂದಿರಿ. ನಿಮ್ಮ ಅದ್ಭುತ ನಾಯಕತ್ವದಿಂದ ದೇಶವಾಸಿಗಳು ಇನ್ನಷ್ಟು ಪ್ರಯೋಜನ ಪಡೆಯುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಗೃಹ ಸಚಿವ ಅಮಿತ್​ ಶಾ ಶುಭ ಕೋರಿ, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ವಾಸಿಸುವ ಅದ್ಭುತ ನಾಯಕ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಶಾ, ನವ ಭಾರತದ ಶಿಲ್ಪಿ ಮೋದಿಜೀ ಅವರು ನಮ್ಮ ದೇಶದ ಪ್ರಾಚೀನ ಪರಂಪರೆಯ ಆಧಾರದ ಮೇಲೆ ಭವ್ಯ ಮತ್ತು ಸ್ವಾವಲಂಬಿ ಭಾರತಕ್ಕೆ ಭದ್ರ ಅಡಿಪಾಯ ಹಾಕಲು ಶ್ರಮಿಸಿದ್ದಾರೆ. ನಾವೆಲ್ಲರೂ ಮೋದಿ ಜೀಯವರಿಂದ “ರಾಷ್ಟ್ರೀಯ ಹಿತಾಸಕ್ತಿ ಮೊದಲು” ಎಂದು ಸ್ಫೂರ್ತಿ ಪಡೆಯುತ್ತೇವೆ. ಇಂತಹ ಅದ್ವಿತೀಯ ನಾಯಕನ ಮಾರ್ಗದರ್ಶನದಲ್ಲಿ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದಿದ್ದಾರೆ.

ಕೇಂದ್ರ ಸಚಿವ ನಿತಿನ್​ ಗಡ್ಕರಿ ಶುಭಾಶಯ ಕೋರಿದ್ದು, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ನೀವು ಆರೋಗ್ಯವಂತರಾಗಿ ದೀರ್ಘಕಾಲ ಬಾಳುವಂತಾಗಲಿ. ನಿಮ್ಮ ಮುಂದಾಳತ್ವದಲ್ಲಿ ದೇಶದಿಂದ ಭಯ, ಹಸಿವು, ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಯಾಗಿ ಮತ್ತೊಮ್ಮೆ ವಿಶ್ವಗುರು ಸ್ಥಾನವನ್ನು ಪಡೆಯಲಿ ಎಂದು ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಜೆ.ಪಿ.ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಮೋದಿ ಅವರ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.

ರಾಜ್ಯ ನಾಯಕರಿಂದ ಪ್ರಧಾನಿಗೆ ಶುಭಾಶಯ: ರಾಜ್ಯದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಹಾಗು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಶುಭ ಕೋರಿದ್ದಾರೆ.

ನಮ್ಮ ಪ್ರೀತಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಆತ್ಮೀಯ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ದೃಷ್ಟಿ, ಸಮರ್ಪಣೆ ಮತ್ತು ನಾಯಕತ್ವವು ರಾಷ್ಟ್ರ ಮತ್ತು ಜಗತ್ತನ್ನು ಪ್ರೇರೇಪಿಸುತ್ತದೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಮತ್ತು ರಾಷ್ಟ್ರದ ಮತ್ತು ಪ್ರಪಂಚದ ಸೇವೆಯಲ್ಲಿ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಎಕ್ಸ್​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

ಹಗಲಿರುಳು ದೇಶದ ಪ್ರಗತಿಗಾಗಿ ಅವಿಶ್ರಾಂತವಾಗಿ ಶ್ರಮಿಸುವ ದಣಿವರಿಯದ ಧೀಮಂತ, ಎಲ್ಲರನ್ನೂ ತನ್ನವರೆನ್ನುವ ಮಾನವೀಯತೆಯ ಅಂತಃಕರಣವುಳ್ಳ ಮಹಾಂತ, ಭಾರತವನ್ನು ವಿಕಾಸದ ಹಾದಿಯಲ್ಲಿ ಮುನ್ನಡೆಸುತ್ತಾ, ಜಗದ್ವಿಖ್ಯಾತಗೊಳಿಸಿದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಾರತವನ್ನು ವಿಶ್ವಗುರುವನ್ನಾಗಿಸುವ ನಿಮ್ಮ ಸಂಕಲ್ಪ ಸಾಕಾರಗೊಳ್ಳಲು ಆ ಭಗವಂತ ನಿಮಗೆ ಮತ್ತಷ್ಟು ಶಕ್ತಿ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಪ್ರಪಂಚವೇ ಗೌರವಿಸುವ ವಿಶ್ವನಾಯಕ, ದೇಶವಾಸಿಗಳ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಿಂದು. ಭಾರತೀಯರಲ್ಲಿ ನವಚೈತನ್ಯ ಮೂಡಿಸಿ ದೇಶ ನಿರ್ಮಾಣದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿರುವ ಮೋದಿಯವರಿಗೆ ಭಗವಂತನು ಆಯುರಾರೋಗ್ಯ ಕರುಣಿಸಿ ರಾಷ್ಟ್ರಸೇವೆಯಲ್ಲಿ ತೊಡಗಲು ಮತ್ತಷ್ಟು ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಪೋಸ್ಟ್​ ಮಾಡಿದ್ದಾರೆ.

ಕಾಯಕಯೋಗಿ, ಭಾರತಾಂಬೆಯ ಸುಪುತ್ರ, ಯುಗದ ಇತಿಹಾಸದ ಸಾಧಕ ತಪಸ್ವಿ, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಕ್ರಿಯಾಶೀಲ ಸೇವೆ ಹೀಗೆಯೇ ಮುಂದುವರಿಯಲಿ. ಮುಕ್ಕೋಟಿ ದೇವರುಗಳ ಆಶೀರ್ವಾದ ಸದಾ ತಮ್ಮ ಮೇಲಿರಲೆಂದು ಪ್ರಾರ್ಥಿಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.