ಗರ್ಭಪಾತದ ಭಯದಿಂದ 7 ತಿಂಗಳು ಆಸ್ಪತ್ರೆಯಲ್ಲೇ ವಾಸ: ಮಂಡ್ಯದ ಮಿಮ್ಸ್ ವೈದ್ಯರ ನೆರವಿನಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ – ಕಹಳೆ ನ್ಯೂಸ್
ಮಂಡ್ಯ: ನಾಲ್ಕು ಬಾರಿ ಗರ್ಭಪಾತವಾಗಿದ್ದ ಮಹಿಳೆಯೊಬ್ಬರು 5ನೇ ಬಾರಿಗೆ ಸತತ 7 ತಿಂಗಳವರೆಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ನಾಲ್ಕು ಬಾರಿ ಗರ್ಭಪಾತವಾಗಿದ್ದರಿಂದ ನೊಂದಿದ್ದ ಮಹಿಳೆಯೊಬ್ಬರು ಐದನೇ ಬಾರಿಗೆ ಇಂಥಹದ್ದೇ ಸಮಸ್ಯೆಯಾಗಬಹುದು ಎಂಬ ಭಯದಿಂದ ಏಳು ತಿಂಗಳ ಕಾಲ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿದ್ದರು. ಅವರು ಈ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆಗೆ ಮಂಡ್ಯ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ. ತಾಲೂಕಿನ ತಗ್ಗಹಳ್ಳಿ ಗ್ರಾಮದ ಮಾದೇಶ್ ಅವರ ಪತ್ನಿ ಜಯಲಕ್ಷ್ಮಿ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಸೆ. 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ.
ಮಾದೇಶ್ ಹಾಗೂ ಜಯಲಕ್ಷ್ಮಿ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಜಯಲಕ್ಷ್ಮಿಗೆ ಗರ್ಭ ಧರಿಸಿದ ಮೂರೇ ತಿಂಗಳಲ್ಲೇ ಗರ್ಭಪಾತವಾಗುತ್ತಿತ್ತು. ಹೀಗೆ ನಾಲ್ಕು ಬಾರಿ ಮಗು ಕಳೆದುಕೊಂಡಿದ್ದರಿಂದ ನೊಂದಿದ್ದ ಜಯಲಕ್ಷ್ಮಿ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಮನೋಹರ್ ಭೇಟಿ ಮಾಡಿ ತಮ್ಮ ಅಳಲು ತೊಡಿಕೊಂಡಿದ್ದರು. ಇವರ ಸಮಸ್ಯೆ ಆಲಿಸಿದ ಡಾ. ಮನೋಹರ್ ಮತ್ತೆ ಈ ರೀತಿಯ ತೊಂದರೆ ಆಗಬಾರದು ಎಂದು ಜಯಲಕ್ಷ್ಮಿ ಅವರನ್ನು ಕಳೆದ ಏಳು ತಿಂಗಳಿಂದ ವೈದ್ಯಕೀಯ ನಿಗಾದಲ್ಲಿ ಇರಿಸಿದ್ದರು. ಈಗ ಅವರು 5ನೇ ಬಾರಿಗೆ ಮಗು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇಡೀ ಕುಟುಂಬದ ಸದಸ್ಯರು ಸಂತಸಗೊಂಡಿದ್ದಾರೆ.
ಸ್ತ್ರೀರೋಗ ತಜ್ಞ ಡಾ.ಮನೋಹರ್ ಮಾತನಾಡಿ, ಜಯಲಕ್ಷ್ಮಿ ಅವರಿಗೆ ಈ ಹಿಂದೆ ಸತತವಾಗಿ ನಾಲ್ಕು ಬಾರಿ ಗರ್ಭಪಾತವಾಗಿದೆ. ಈಗ 5ನೇ ಬಾರಿಗೆ ಗರ್ಭಣಿಯಾಗಿದ್ದರು. 8/3/2023 ರಂದು ಅವರು ಹೊರ ರೋಗಿ ವಿಭಾಗಕ್ಕೆ ಬಂದಿದ್ದರು. ಈ ಹಿಂದೆ ಅನೇಕ ಬಾರಿ ಆದಂತೆ ಗರ್ಭಪಾತ ಆಗಬಾರದು ಎಂದು ಅವರಿಗೆ ನಾವು ಆಪ್ತ ಸಮಾಲೋಚನೆ ಮಾಡಿದ್ದೆವು. ಸಮಸ್ಯೆ ಏನು ಎಂದು ತಿಳಿದುಕೊಳ್ಳಲು ಹಲವು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಅವರು ಬಡವರಾಗಿರುವುದರಿಂದ ಅವರ ಬಳಿ ಹಣ ಇರಲಿಲ್ಲ. ನಂತರ ನೀವು ಆಸ್ಪತ್ರೆಯಲ್ಲಿ ದಾಖಲಾದರೆ ಸಂಪೂರ್ಣ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತೇವೆ ಎಂದು ಅವರಿಗೆ ಭರವಸೆ ನೀಡಿದ್ದೆವು ಎಂದರು.
ಅವರು 10/3/23ರಂದು ದಾಖಲಾದರು. ನಂತರ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರು, ಶುಶ್ರೂಷಕರು ನಿಗಾ ವಹಿಸಿದ್ದರು. ಸೆ.6ರಂದು ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಜಯಲಕ್ಷ್ಮಿ ಮಾತನಾಡಿ, ವೈದ್ಯ ಮನೋಹರ್ ಅವರು ತುಂಬಾ ಕಾಳಜಿಯಿಂದಾಗಿ ವಹಿಸಿದ್ದಾರೆ. ಅವರು ನಮಗೆ ದೇವರ ಸಮಾನ. ಆಸ್ಪತ್ರೆಯ ಪ್ರತಿಯೊಬ್ಬರು ನನ್ನನ್ನು ಮಗಳಂತೆ ನೋಡಿಕೊಂಡಿದ್ದಾರೆ. ಕಳೆದ ಏಳು ತಿಂಗಳುಗಳಿಂದ ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ಮಗು ಜನಿಸಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದರು.