ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ದಿನಾಂಕ 06.10.2018 ರಂದು ತಾಲ್ಲೂಕು ಅಧಿಕಾರಿಗಳಿಗೆ ಗೋಕರ್ಣ ಮಹಾಬಲೇಶ್ವರ ದೇವಾಲಯದ ಸಮಗ್ರ ಆಡಳಿತವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಸೂಚಿಸಿದ್ದು, ಆ ಆದೇಶದ ಮೇರೆಗೆ ದೇವಾಲಯದ ನಿರ್ವಹಣಾಧಿಕಾರ ಇಂದು ಬೆಳಗ್ಗೆ ಶ್ರೀಮಠಕ್ಕೆ ಹಸ್ತಾಂತರವಾಗುತ್ತಿತ್ತು, ಆದರೆ ರಾಜಕೀಯ ಒತ್ತಡದ ಕಾರಣದಿಂದಾಗಿ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸರ್ಕಾರೀ ವ್ಯವಸ್ಥೆಯ ದುರ್ಬಳಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಗೋಕರ್ಣ ದೇವಾಲಯವನ್ನು ಶ್ರೀಮಠಕ್ಕೆ ಹಸ್ತಾಂತರಿಸಿ, ವರದಿ ನೀಡುವಂತೆ ಕುಮಟಾ ತಾಲ್ಲೂಕು ಆಯುಕ್ತರಿಗೆ ಆದೇಶಿಸಿದ್ದು, ಅದರ ಅನ್ವಯ ನಿನ್ನೆ (08.10.2018) ಕುಮಟಾ ತಾಲ್ಲೂಕು ಅಧಿಕಾರಿಗಳು ಶ್ರೀಮಠದ ಜಿ.ಕೆ ಹೆಗಡೆಯವರಿಗೆ ಪತ್ರ ಬರೆದು ಇಂದು (09.10.2018) ಬೆಳಗ್ಗೆ 10 ಗಂಟೆಗೆ ಹಸ್ತಾಂತರ ಮಾಡುತ್ತೇವೆ ಸಿದ್ಧರಾಗಿರಿ ಎಂದು ತಿಳಿಸಿರುತ್ತಾರೆ.
ಅದರಂತೆ, ಇಂದು ಬೆಳಗ್ಗೆ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದ್ದು, ದೇವರ ಆಭರಣಗಳನ್ನು ಮಾಪನ ಮಾಡಿ ಹಸ್ತಾಂತರಿಸಲಾಗಿತ್ತು. ಈ ಮಧ್ಯೆ ಬಂದ ‘ದೂರವಾಣಿ ಕರೆಯ’ ಆದೇಶದ ಮೇರೆಗೆ ಪ್ರಕ್ರಿಯೆಯನ್ನು ಅಧಿಕಾರಿಗಳು ಅಲ್ಲಿಗೇ ನಿಲ್ಲಿಸಿರುತ್ತಾರೆ!
ಸುಪ್ರೀಂ ಕೋರ್ಟಿನ ಆದೇಶದಲ್ಲಿ ಯಾವುದೇ ಗೊಂದಲ ಇಲ್ಲ.
ಸುಪ್ರೀಂ ಕೋರ್ಟಿನ ಆದೇಶದ ಅನ್ವಯ ದೇವಾಲಯದ ಸಮಗ್ರ ಆಡಳಿತವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿ ಎಂದು ಸ್ವತಃ ಜಿಲ್ಲಾಧಿಕಾರಿಗಳೇ 06.10.18 ರಂದು ತಹಶೀಲ್ದಾರರಿಗೆ ಆದೇಶಿಸಿದ್ದಾರೆ. ಅದೇ ಪತ್ರದಲ್ಲಿ ; ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ದೇವಾಲಯದ ಆಡಳಿತ ಸೆ. 19 ರಂದು ಹಸ್ತಾಂತರವಾಗಿದೆ. ಆದರೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸೆ. 07 ರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಆದೇಶ ನೀಡಿರುವುದರಿಂದ ದೇವಾಲಯದ ಆಡಳಿತ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರವಾಗಬೇಕು ಎಂದು ಸ್ವತಃ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ. ಆದ್ದರಿಂದ ಮಾನ್ಯ ನ್ಯಾಯಾಲಯದ ತೀರ್ಪಿನಲ್ಲಿ ಗೊಂದಲ ಮೂಡುವ ಯಾವುದೇ ಅವಕಾಶಗಳು ಇರುವುದಿಲ್ಲ.
ಶ್ರೀರಾಮಚಂದ್ರಾಪುರಮಠದ ಮೇಲೆ ನಿರಂತರವಾಗಿ ನಡೆಯುತ್ತಿರುವ ವ್ಯವಸ್ಥಿತ ದಾಳಿಗೆ ಸ್ಪಷ್ಟ ನಿದರ್ಶನ
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ, ಅದನ್ನು ಅನುಸರಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ, ಕುಮಟಾ ತಾಲ್ಲೂಕು ಅಧಿಕಾರಿಗಳಿಂದ ಹಸ್ತಾಂತರ ಪತ್ರ ಇವೆಲ್ಲವುಗಳು ಇದ್ದರೂ… ನ್ಯಾಯಬದ್ಧವಾಗಿ ನಡೆದಿದ್ದ ಹಸ್ತಾಂತರ ಪ್ರಕ್ರಿಯೆಯನ್ನು ನಿಲ್ಲಿಸಿರುತ್ತಾರೆ! ಇದನ್ನು ಗಮನಿಸಿದಾಗ ರಾಜಕೀಯ ಒತ್ತಡ ಸುಪ್ರೀಂ ಕೋರ್ಟಿನ ಆದೇಶಕ್ಕಿಂತ ಮಿಗಿಲಾಯಿತೇ? ಸರ್ಕಾರೀ ವ್ಯವಸ್ಥೆಯನ್ನು ಹೀಗೂ ದುರ್ಬಳಕೆ ಮಾಡಿಕೊಳ್ಳಬಹುದೇ? ಎಂಬಿತ್ಯಾದಿ ಪ್ರಶ್ನೆ ಉದ್ಭವವಾಗುತ್ತವೆ.