ಒಂದು ಕಡೆ ವಾಸಿಸಲು ಸ್ವಂತ ಮನೆಯೇ ಇಲ್ಲ, ಇನ್ನೊಂದು ಕಡೆಯಲ್ಲಿ ಅನಾರೋಗ್ಯ ಪೀಡಿತ ತಾಯಿ, ದುಡಿಯಲು ಶಕ್ತಿಹೀನಳಾದ ಮಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದ್ದು ಕಣ್ಣಿರಲ್ಲೇ ಕೈತೊಳೆಯುವ ಕುಟುಂಬದ ವ್ಯಥೆಯನ್ನು ಹೇಳುತ್ತೆ ಈ ಸ್ಟೋರಿ.
ಇನ್ನು ಮುಂದೆ ತನ್ನಿಂದ ದುಡಿದು ಜೀವನ ಸಾಗಿಸಲು ಸಾಧ್ಯವಿಲ್ಲ. ದಿನಂದಿಂದ ದಿನಕ್ಕೆ ತಾಯಿಯ ಆರೋಗ್ಯ ಕ್ಷೀಣಿಸುತ್ತಿದೆ. ತಮ್ಮ ಕಷ್ಟವನ್ನು ಕೇಳುವವರು ಯಾರೂ ಇಲ್ಲ. ನಮಗಿಬ್ಬರಿಗೆ ಜೀವನವೇ ಸಾಕಾಗಿದೆ… ಎಂಬ ಕೂಗು ಕೇಳಿ ಕೇಳಿಬರುತ್ತಿರುವ ದೃಶ್ಯ ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ಕೇಳಿಬರುತ್ತಿದೆ.
ಕಷ್ಟದಿಂದ ದಿನದೂಡುತ್ತಿರುವ ಅಂಗವಿಕಲ ಮಹಿಳೆಯೊಬ್ಬರು ಕಣ್ಣಿರಲ್ಲೇ ತಮ್ಮ ಜೀವನವನ್ನು ದೂಡ್ತಾ ಇದ್ದಾರೆ. ಸುಮಾರು 35 ವರ್ಷಗಳಿಂದ ಪಾಣೆಮಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ಕಮಲಾಕ್ಷಿ ಹಾಗೂ 80ರ ಹರೆಯ ತಾಯಿ ಜಯಲಕ್ಷಿ ಅವರೊಂದಿಗೆ ವಾಸವಾಗಿದ್ದಾರೆ. ಕಮಲಾಕ್ಷಿ ಅವರು ಹುಟ್ಟಿನಿಂದಲೇ ತನ್ನ ಕಾಲಿನ ನ್ಯೂನತೆಯಿಂದ ಅಂಗವಿಕಲರಾಗಿದ್ದರೆ, ತಾಯಿಗೆ ಒಂದು ಕಣ್ಣು ಕಾಣಿಸುವುದಿಲ್ಲ.
ಇದುವರೆಗೂ ಕಮಲಾಕ್ಷಿ ಅವರು ಹತ್ತಿರ ಹೊಟೇಲ್‌ವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ತನ್ನ ತಾಯಿಯ ಚಿಕಿತ್ಸಾ ವೆಚ್ಚ ಹಾಗೂ ಮನೆಬಾಡಿಗೆ ವೆಚ್ಚವನ್ನು ಭರಿಸುತ್ತಿದ್ದರು. ಇದೀಗ ಕಮಲಾಕ್ಷಿ ಅವರ ಕಾಲಿನ ಬಲ ಮತ್ತಷ್ಟು ಹೀನಕೊಂಡಿದ್ದು, ನಡೆದಾಡದಂತಹ ಸಂಕಷ್ಟ ಉಂಟಾಗಿದೆ.
ಅಲ್ಲದೆ, ತಾಯಿಗೆ ವಯಸ್ಸಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವರಿಗೆ ಸರಿಯಾಗಿ ಕಿವಿಕೇಳಿಸುದಿಲ್ಲ. ಮಾತನಾಡುವುದನ್ನು ಕೂಡ ಕಡಿಮೆ ಕೈ ಸನ್ನೆ ಮೂಲಕ ತಿಳಿಸುತ್ತಾರೆ. ಈ ಮೊದಲು ಮಂಗಳೂರಿನ ಆಸ್ಪತ್ರೆಯಲ್ಲಿ ತನ್ನ ಕಾಲಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈ ಚಿಕಿತ್ಸಾ ವೆಚ್ಚವನ್ನು ಶಾಸಕ ರಾಜೇಶ್ ನಾಯ್ಕ್ ಅವರು ಭರಿಸಿರುತ್ತಾರೆ, ಇದೀಗ ಮತ್ತೆ ಇನ್ನೊಂದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಭಯ ಉಂಟಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮನೆ ನಿವೇಶನ ಕೇಳಿ ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ನಿಮ್ಮ ಮುಂದೆ ಈ ವಿಷಯವನ್ನು ತಿಳಿಸುತ್ತಿದ್ದೇನೆ ಎಂದು ಮಾಧ್ಯಮದ ಮುಂದೆ ಬೇಡಿಕೊಂಡರು. ಈ ತಾಯಿ ಮಗಳ ಜೀವನೋಪಾಯಕ್ಕೆ ಸರಕಾರ ಅಥವಾ ಸಂಘ ಸಂಸ್ಥೆಗಳು ಸ್ಪಂದಿಸುವ ಮೂಲಕ ಅಂಗವಿಕಲ ಜೀವಕ್ಕೆ ಬೆಳಕಾಗಬೇಕಾಗಿದೆ.