ಮಂಗಳೂರು: ಮಂಗಳೂರು ನಗರದ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳನನ್ನು ಬಂಧಿಸಿ ಸುಲಿಗೆ ಮಾಡಿದ ಚಿನ್ನಾಭರಣ ಹಾಗೂ ಸರಕಳ್ಳತನ ಮಾಡಲು ಉಪಯೋಗಿಸಿದ ಕಾರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಇತ್ತೀಚೆಗಿನ ದಿನಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾಕಿಬ್ ಎಂಬಾತನ್ನು ಪೊಲೀಸರು ಬಂಧಿಸಿದ್ದು ಈತ ಅಮಾಯಕ ವಯಸ್ಕರ ಹಾಗೂ ಮಹಿಳೆಯರಿಂದ ಸುಲಿಗೆ ಮಾಡಿದ್ದು, ಸುಲಿಗೆ ಮಾಡಿದ 140 ಗ್ರಾಂ ತೂಕದ ಒಟ್ಟು 5 ಚಿನ್ನದ ಸರ, ಒಂದು ಕರಿಮಣಿ ಸರ, 2 ಚಿನ್ನದ ಪೆಂಡೆಂಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 4,15,000/- ಆಗಿರುತ್ತದೆ. ಅಲ್ಲದೇ ಆರೋಪಿಯ ವಶದಿಂದ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಉಪಯೋಗಿಸಿದ ಮಾರುತಿ ರಿಡ್ಜ್ ಕಾರು, 2 ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,60,000/ ಆಗಿರುತ್ತದೆ. ಆರೋಪಿ ಶಾಕಿಬ್ ಸಾಬು ಎಂಬಾತನ ಜೊತೆಯಲ್ಲಿ ಈ ಸರಕಳ್ಳತನ ಪ್ರಕರಣದಲ್ಲಿ ಇತರ ಆರೋಪಿಗಳು ಭಾಗಿಯಾಗಿದ್ದು, ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮೂಡಬಿದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.