Recent Posts

Sunday, January 19, 2025
ಸುದ್ದಿ

ನೈಸರ್ಗಿಕ ವಿಕೋಪದಿಂದ ಭಾರತ 80 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ: ಯುಎನ್‌ಐಎಸ್‌ಡಿಆರ್ ವರದಿ – ಕಹಳೆ ನ್ಯೂಸ್

ಹೊಸದಿಲ್ಲಿ: ಭಾರತದಂಥ ಕಡಿಮೆ ಆದಾಯದ ದೇಶಗಳಲ್ಲಿ ಹವಾಮಾನ ಬದಲಾವಣೆ, ಅಭಿವೃದ್ಧಿ ಪ್ರಕ್ರಿಯೆಯನ್ನು ಅಪಾಯಕಾರಿಯನ್ನಾಗಿ ಮಾಡಿದೆ. ಕಳೆದ 20 ವರ್ಷಗಳಲ್ಲಿ ನೈಸರ್ಗಿಕ ವಿಕೋಪಗಳಿಂದಾಗಿ ಭಾರತ 80 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ ಎಂದು ಯುಎನ್ ಆಫೀಸ್ ಫಾರ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ (ಯುಎನ್‌ಐಎಸ್‌ಡಿಆರ್) ಬುಧವಾರ ಬಿಡುಗಡೆಗೊಳಿಸಿದ ಅಧ್ಯಯನ ವರದಿ ಬಹಿರಂಗಪಡಿಸಿದೆ.

ಭಾರೀ ಆರ್ಥಿಕ ನಷ್ಟ ಅನುಭವಿಸಿದ ವಿಶ್ವದ ಐದು ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಒಂದು. ಜಾಗತಿಕವಾಗಿ 1998ರಿಂದ 2017ರ ಅವಧಿಯಲ್ಲಿ ಸುಮಾರು 3 ಸಾವಿರ ಶತಕೋಟಿ ಡಾಲರ್ ನಷ್ಟ ಸಂಭವಿಸಿದೆ. 1978-1997ರ ಅವಧಿಗೆ ಹೋಲಿಸಿದರೆ, ನಷ್ಟದ ಪ್ರಮಾಣ ಶೇಕಡ 120ರಷ್ಟು ಹೆಚ್ಚಿದೆ. ಆದರೆ ಕೇವಲ ಹವಾಮಾನ ಬದಲಾವಣೆ ಸಂಬಂಧಿ ವಿಕೋಪಗಳನ್ನಷ್ಟೇ ಪರಿಗಣಿಸಿದರೆ, ಈ ಪ್ರಮಾಣದಲ್ಲಿ ಆಗಿರುವ ಹೆಚ್ಚಳ ಶೇಕಡ 151 ಎಂದು ವರದಿ ಸ್ಪಷ್ಟಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಮೆರಿಕ ಈ ಅವಧಿಯಲ್ಲಿ 945 ಶತಕೋಟಿ ಡಾಲರ್ ನಷ್ಟ ಅನುಭವಿಸುವ ಮೂಲಕ ಅತಿಹೆಚ್ಚು ನಷ್ಟ ಅನುಭವಿಸಿದ ದೇಶವಾಗಿದೆ. ಚೀನಾ (492 ಶತಕೋಟಿ ಡಾಲರ್), ಜಪಾನ್ (376 ಶತಕೋಟಿ ಡಾಲರ್) ನಂತರದ ಸ್ಥಾನಗಳಲ್ಲಿವೆ.

20 ವರ್ಷಗಳಲ್ಲಿ ವಿಕೋಪಪೀಡಿತ ದೇಶಗಳಿಗೆ ಒಟ್ಟು 2908 ಶತಕೋಟಿ ಡಾಲರ್ ನಷ್ಟವಾಗಿದೆ. ಈ ಪೈಕಿ ಹವಾಮಾನ ಸಂಬಂಧಿ ವಿಕೋಪಗಳಿಂದ ಆಗಿರುವ ನಷ್ಟ 2245 ಶತಕೋಟಿ ಅಂದರೆ ಒಟ್ಟು ನಷ್ಟದ ಶೇಕಡ 77ರಷ್ಟು. ಹಿಂದಿನ 20 ವರ್ಷಗಳ ಅವಧಿಯಲ್ಲಿ ಒಟ್ಟು 1313 ಶತಕೋಟಿ ಡಾಲರ್ ನಷ್ಟ ಸಂಭವಿಸಿತ್ತು ಎಂದು ಯುಎನ್‌ಐಎಸ್‌ಡಿಆರ್ ಮುಖ್ಯಸ್ಥೆ ಮಮಿ ಮಿಝುತೊರಿ ಹೇಳಿದ್ದಾರೆ.

ಮಧ್ಯಮ ಆದಾಯದ ದೇಶಗಳಿಗೆ ಆಗಿರುವ ಈ ಭಾರೀ ಪ್ರಮಾಣದ ನಷ್ಟ ಭವಿಷ್ಯದ ಅಭಿವೃದ್ಧಿಗೆ ಮಾರಕ. ಜತೆಗೆ ಬಡತನ ನಿರ್ಮೂಲನೆಯಂಥ 17 ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಕೂಡಾ ಅಡ್ಡಿಯಾಗಲಿದೆ. ಕಳೆದ 20 ವರ್ಷಗಳಲ್ಲಿ ಹವಾಮಾನ ಸಂಬಂಧಿ ವಿಕೋಪಗಳಿಂದ 13 ಲಕ್ಷ ಮಂದಿ ಮೃತಪಟ್ಟಿದ್ದು, 4.4 ಶತಕೋಟಿ ಮಂದಿ ಗಾಯಗೊಂಡಿದ್ದಾರೆ ಮತ್ತು ನಿರ್ಗತಿಕರಾಗಿದ್ದಾರೆ. ಭಾರತ ಅತಿಹೆಚ್ಚು ನಷ್ಟಕ್ಕೀಡಾದ ದೇಶವಾಗಿದ್ದು, ಪ್ರತಿ ವರ್ಷ ಸಾವಿರಾರು ಮಂದಿ ಮೃತರಾಗುತ್ತಿದ್ದಾರೆ. ನೂರಾರು ಕೋಟಿ ಮೌಲ್ಯದ ಆಸ್ತಿಗಳು ನಷ್ಟವಾಗುತ್ತಿವೆ ಎಂದು ವಿವರಿಸಿದೆ.