ಮೂಡುಬಿದಿರೆ: ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಕೀರ್ತಿಶೇಷ ಎಂ.ಕೆ. ಅನಂತರಾಜ್ ಒಳಾಂಗಣ ಕ್ರೀಡಾ ಸಂಕೀರ್ಣ ಬುಧವಾರ ಸಾಯಂಕಾಲ ಲೋಕಾರ್ಪಣೆಗೊಂಡಿತು.
ಈಜುಕೊಳ, ಶಟಲ್ ಬ್ಯಾಡ್ಮಿಂಟನ್, ಕಬಡ್ಡಿ, ಖೋ ಖೋ ಕೋಟ್೯ಗಳನ್ನೊಳಗೊಂಡ ಕ್ರೀಡಾ ಸಂಕೀರ್ಣವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಟಾಟಿಸಿ ನಂತರ ಮುಂಡುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಮೂಡುಬಿದಿರೆ ಎಂದರೆ ರಾಜ್ಯ- ಅಂತರಾಜ್ಯದವರು ಆಳ್ವಾಸ್ ಎಂದೇ ಗುರುತಿಸುವುದು. ಕೇವಲ ಶಿಕ್ಷಣಕ್ಕೆ ಮಾತ್ರ ಈ ಸಂಸ್ಥೆ ಸೀಮಿತವಾಗದೆ ಕ್ರೀಡಾ ಪ್ರತಿಭೆಗಳಿಗೂ ಅವಕಾಶ ಕಲ್ಪಿಸುತ್ತಿದೆ. ಕ್ರೀಡಾಸಕ್ತರಿಗೂ ಇದರಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ ಎಂದರು. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀವರ್ಚನ ನೀಡಿ, ಡಾ.ಮೋಹನ ಆಳ್ವರು ತಮ್ಮ ಕ್ಯಾಂಪಸ್ ವಿವಿಧ ಯೋಜನೆಗಳಿಗೆ ಮೇರು ವ್ಯಕ್ತಿಗಳ ಹೆಸರನ್ನಿಟ್ಟು ಅವರನ್ನು ನೆನಪಿಸುವಂತೆ ಮಾಡುತ್ತಿರುವುದು ಶ್ರೇಷ್ಠ ಕೆಲಸ. ಕೇಂದ್ರ, ರಾಜ್ಯ ಸರ್ಕಾರಗಳು ವಿವಿಧ ಕ್ರೀಡೆಗಳಿಗೆ ಕ್ರೀಡಾಪಟುಗಳನ್ನು ಸೃಷ್ಠಿಸುವಂತೆ ಹೇಳಿದರೆ ಅದನ್ನೂ ಸಮರ್ಥವಾಗಿ ಮಾಡುವ ಶಕ್ತಿ ಆಳ್ವರಲ್ಲಿದೆ. ಇತರರಿಗೆ ನೀಡುವ ಗೌರವದಿಂದ ಭಕ್ತಿಯೋಗ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳಿಂದ ಆನಂದಯೋಗವಿದೆ. ಇವೆರಡೂ ಯೋಗ, ಯೋಗ್ಯತೆ ಆಳ್ವರಲ್ಲಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಡಿಸೆಂಬರ್ ತಿಂಗಳಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಅನ್ನು ಆಯೋಜಿಸುವ ಚಿಂತನೆಯಲ್ಲಿದ್ದು, ಇದು ಈ ಬಾರಿ ಮೂಡುಬಿದಿರೆ ಉತ್ಸವವಾಗಿ ಆಚರಿಸಲಿದೆ ಎಂದ ಅವರು ಅನಾರೋಗ್ಯದಲ್ಲಿರುವಾಗ ಆದ ಘಟನೆಗಳನ್ನು ಮೆಲುಕು ಹಾಕಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಬೋಜೆಗೌಡ, ಉದ್ಯಮಿ ಕೆ. ಶ್ರೀಪತಿ ಭಟ್, ವಕೀಲ ಎಂ.ಕೆ. ವಿಜಯ್ ಕುಮಾರ್, ಚೌಟರ ಅರಮನೆಯ ಕುಲದೀಪ್ ಎಂ., ಪುತ್ತಿಗೆ ಗ್ರಾಪಂ ಅಧ್ಯಕ್ಷೆ ರಾಧ, ಹರಿಕೃಷ್ಣ ಪುನರೂರು, ಜಯಶ್ರೀ ಅಮರನಾಥ ಶೆಟ್ಟಿ, ನಾರಾಯಣ ಪಿ.ಎಂ., ಎಂಸಿಎಸ್‌ನ ವಿಶೇಷ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಎಂ., ಮೋಹನ ಆಳ್ವರ ಸಹೋದರರು ಉಪಸ್ಥಿತರಿದ್ದರು.
ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.