ಮೂಡುಬಿದಿರೆ : ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ಪ್ರಾಂತ ಕಮಿಟಿ ಹಾಗೂ ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠದ ಸಂಯುಕ್ತ ಆಶ್ರಯದಲ್ಲಿ ಕೊಡಗು, ದ.ಕ ಹಾಗೂ ಉಡುಪಿ ಮೂರು ಜಿಲ್ಲೆಗಳ ಸಂತರ ಸಮಾವೇಶವು ಮಹಾವೀರ ಭವನದಲ್ಲಿ ಅಕ್ಟೋಬರ್ 9ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ, ಮಂಗಳೂರು ಚಿಲಿಂಬಿಯಲ್ಲಿರುವ ಓಂ ಶ್ರೀ ಮಠದ ಮಹಾಮಂಡಲೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಜೈನ ಮಠದ ರಮಾರಾಣಿ ಶೋಧ ಸಂಸ್ಥಾನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಧರ್ಮರಕ್ಷಣೆ, ರಾಜ್ಯರಕ್ಷಣೆ, ಗೋರಕ್ಷಣೆ ಸಂತ ಸಮಿತಿಯ ಪ್ರಮುಖ ಆಧ್ಯತೆ. ಸನಾತನ ಸಂಸ್ಕೃತಿಗೆ ಶ್ರೇಷ್ಠ ಸ್ಥಾನಮಾನ ನೀಡುತ್ತಿರುವ ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಮಾವೇಶ ನಡೆಯುತ್ತಿರುವುದು ಸಂತಸ.ಆಯೋಧ್ಯೆ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸಂತರ ಪಟ್ಟಿ, ವಾರಣಾಸಿಯಲ್ಲಿ ನಡೆಯುವ ಸಂಸ್ಕೃತಿ ಸಂಸತ್ತಿನಲ್ಲಿ ಭಾಗವಹಿಸುವುದು, ಕರ್ನಾಟಕದಲ್ಲಿ ಸಂತರು ಹಾಗೂ ಸನಾತನಿಗಳು ಎದುರಿಸುವ ವಿಷಯಗಳು, ಮುಜರಾಯಿ ಇಲಾಖೆಯಿಂದ ಮಠಗಳಿಗೆ ಅಗತ್ಯವಾದ ಅನುದಾನ ಲಭ್ಯವಾಗುವ ಕುರಿತು, ಸಂಘಟನಾ ವಿಪಲಿಕರಣ ಸಹಿತ ವಿವಿಧ ವಿಚಾರಗಳು ಸಮಾವೇಶದಲ್ಲಿ ಚರ್ಚೆಯಾಗಲಿದೆ ಎಂದು ಸ್ವಾಮೀಜಿ ತಿಳಿಸಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಸಂತರ ಹೊಂದಾಣಿಕೆ, ವೈಚಾರಿಕ ಚಿಂತನೆಗಳ ವಿನಿಮಯ, ಪರಸ್ಪರ ವಿಶ್ವಾಸವನ್ನು ಬೆಳೆಸುವಲ್ಲಿ ಈ ಸಮಾವೇಶ ನೆರವಾಗಲಿದೆ. ಧರ್ಮರಕ್ಷಣೆಗೆ ಈ ಸಮಾವೇಶವು ಉನ್ನತ ಕೊಡುಗೆ ನೀಡಲಿದೆ. ಕೆ.ಶ್ರೀಪತಿ ಭಟ್, ಬಾಹುಬಲಿ ಪ್ರಸಾದ್, ಬಸದಿಗಳ ಮೊಕ್ತೇಸರರು ಸೇರಿದಂತೆ 30 ಮಂದಿಯ ಸ್ವಾಗತ ಸಮಿತಿಯನ್ನು ಸಮಾವೇಶಕ್ಕಾಗಿ ರಚಿಸಲಾಗಿದೆ ಎಂದರು.
ರಾಜ್ಯ ಕಮಿಟಿಯ ಸಹ ಅಧ್ಯಕ್ಷೆ ಮಾತಾಶ್ರೀ ಓಂ ಶ್ರೀ ಶಿವಜ್ಞಾನಮಣಿ ಸರಸ್ವತಿ ಸಾಧ್ವಿ, ಬಸದಿಗಳ ಮೊಕ್ತೇಸರಾದ ಪಟ್ನಶೆಟ್ಟಿ ಸುಧೀಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.