Wednesday, January 22, 2025
ದಕ್ಷಿಣ ಕನ್ನಡರಾಜ್ಯಸುದ್ದಿ

ಸಂಸತ್‌ನಲ್ಲಿ ಭಾಷಣ ಮರೆಯಲಾಗದ ಕ್ಷಣ : ರಾಜ್ಯಕ್ಕೆ ಕೀರ್ತಿ ತಂದ ಕರಾವಳಿಯ ಸೌರವ್‌ ಸಾಲ್ಯಾನ್‌ – ಕಹಳೆ ನ್ಯೂಸ್

ಮಂಗಳೂರು: ಗಾಂಧೀ ಜಯಂತಿ ಪ್ರಯುಕ್ತ ಅ. 2ರಂದು ದಿಲ್ಲಿಯ ಸಂಸತ್‌ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಮೂಲಕ ಕರಾವಳಿಯ ವಿದ್ಯಾರ್ಥಿ ಸೌರವ್‌ ಸಾಲ್ಯಾನ್‌ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರದ ವತಿಯಿಂದ ಸಂಸತ್‌ ಭವನದಲ್ಲಿ ಭಾಷಣ ಮಾಡಲು ಅವಕಾಶ ಪಡೆದ ಕೆಲವೇ ಕೆಲವು ಮಂದಿಯಲ್ಲಿ ಸೌರವ್‌ ಒಬ್ಬರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಲಾಲ್‌ಬಹದ್ದೂರ್‌ ಶಾಸ್ತ್ರಿ ಜೀವನ ಚರಿತ್ರೆ ಕುರಿತಂತೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಪ್ರಥಮ ಬಹುಮಾನ ಗೆದ್ದು ಸಂಸತ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಆಯ್ಕೆಯಾಗಿದ್ದರು.

ಈ ಕುರಿತು ನೆಹರೂ ಯುವ ಕೇಂದ್ರದ ಆಡಳಿತಾಧಿಕಾರಿ ಜಗದೀಶ್‌ ಕೆ. ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಇದೇ ವೇಳೆ ದಿಲ್ಲಿಯ ಸಂತಸದ ಕ್ಷಣಗಳನ್ನು ಹಂಚಿಕೊಂಡ ಸೌರವ್‌, ಸಂಸತ್‌ ಭವನದಲ್ಲಿ ಭಾಷಣ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಜೀವಮಾನದಲ್ಲಿ ಎಂದೂ ಮರೆಯಲಾಗದ ಕ್ಷಣ. ಇಂತಹ ಅವಕಾಶ ಸಿಗಬಹುದೆಂದು ಎಂದೂ ಊಹಿಸಿರಲಿಲ್ಲ. ಹೊಸ ಸಂಸತ್‌ ಭವನ ವೀಕ್ಷಣೆಯ ಸದವಕಾಶವೂ ಲಭಿಸಿದೆ. ಈ ಸಾಧನೆಯ ಹಿಂದೆ ಪೋಷಕರು, ಅಧ್ಯಾಪಕರು ನನಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದ್ದಾರೆ. ಮಂಗಳೂರಿನಿಂದ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಲಭಿಸಿದ್ದು ಅತ್ಯುತ್ತಮ ಅನುಭವ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.

ಸೌರವ್‌ ಅವರು ದಡ್ಡಲ್‌ಕಾಡ್‌ನ‌ ದಿ| ಸುಧೀರ್‌ ಕರ್ಕೇರ ಹಾಗೂ ಪುಷ್ಪಾವತಿ ದಂಪತಿಯ ಪುತ್ರನಾಗಿದ್ದು, ಕೆನರಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ. ಓದುತ್ತಿದ್ದಾರೆ.
ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ| ಪ್ರೇಮಲತಾ ವಿ., ಆಡಳಿತಾಧಿಕಾರಿ ದೀಪ್ತಿ ನಾಯಕ್‌, ಪ್ರಾಧ್ಯಾಪಕಿ ಸೀಮಾಪ್ರಭು ಎಸ್‌., ಸೌರವ್‌ ತಾಯಿ ಪುಷ್ಪಾವತಿ, ಪ್ರಿಯಾ ಸುದೇಶ್‌ ಉಪಸ್ಥಿತರಿದ್ದರು.