ಪುತ್ತೂರು: ಹಿಂದೂ ಜಾಗೃತಿಗಾಗಿ ಆರಂಭವಾದ ವಿಶ್ವ ಹಿಂದೂ ಪರಿಷತ್ಗೆ ಇದೀಗ 60 ವರ್ಷಗಳ ಸಂಭ್ರಮ. ಹೀಗಾಗಿ ಭಾರತದಲ್ಲಿ ಈಗಾಗಲೇ ಶೌರ್ಯ ಜಾಗರಣ ರಥ ಯಾತ್ರೆ ಆರಂಭವಾಗಿದೆ. ಕರ್ನಾಟಕದಲ್ಲೂ ಚಿತ್ರದುರ್ಗದಿಂದ ಕರಾವಳಿ ಜಿಲ್ಲೆ ಉಡುಪಿಗೆ ಶೌರ್ಯ ರಥ ಯಾತ್ರೆ ಹಮ್ಮಿಕೊಂಡಿದ್ದು ಸೆಪ್ಟೆಂಬರ್ 25ರಂದು ಚಿತ್ರದುರ್ಗದಿಂದ ಹೊರಟ ರಥ ಯಾತ್ರೆ ಇಂದು ಮುತ್ತಿನ ಬಗರಿ ಪುತ್ತೂರಿನ ಪುಣ್ಯ ಮಣ್ಣಿಗೆ ಆಗಮಿಸಿದೆ.
ಪುತ್ತೂರಿನ ಬೊಳವಾರಿನಲ್ಲಿ ಹಿಂದೂ ಶೌರ್ಯ ಜಾಗರಣ ರಥಯಾತ್ರೆಗೆ ಅದ್ಧೂರಿ ಸ್ವಾಗತ ನಡೆದು, ಅಲ್ಲಿಂದ ಕಿಲ್ಲೆ ಮೈದಾನದವರೆಗೆ ವಿಜ್ರಂಭಣೆಯ ಶೋಭಾಯಾತ್ರೆ ಸಾಗಲಿದೆ. ಇನ್ನು ಶೋಭಾಯಾತ್ರೆಯು ಶಂಖನಾದ, ಭಜನೆ, ಕೀರ್ತನೆಗಳು, ದೇಶದ ಮಹಾಪುರುಷರ ,ಶೌರ್ಯ ಪರಾಕ್ರಮಗಳ, ಬಲಿದಾನಗೈದ ವೀರರ ಸ್ತಬ್ದ ಚಿತ್ರಗಳೊಂದಿಗೆ, ಚಂಡೆ, ಕೊಂಬು ವಾದನಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ರೀತಿಯಲ್ಲಿ ರಾಜಮಾರ್ಗದಲ್ಲಿ ಸಾಗಲಿದೆ. ಇದಾದ ಬಳಿಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಶೋಭಾಯಾತ್ರೆ ಸಮಾವೇಶಗೊಳ್ಳಲಿದೆ.
ಸಮಾರೋಪ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ನ ಜೇಷ್ಟ ಪ್ರಚಾರಕ್ ಸು ರಾಮಣ್ಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪುತ್ತೂರಿನ ಪುಣ್ಯ ಮಣ್ಣಿನಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತುಂಬುವ ನಿಟ್ಟಿನಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದು, ಮುತ್ತಿನ ನಗರಿಯ ಅಲಂಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆ ಪುತ್ತೂರು ಪುರ ಪ್ರವೇಶಿಸುವ ಬೊಳುವಾರ ವೃತ್ತ ಈಗಾಗಲೇ ಕೇಸರಿಮಯವಾಗಿದ್ದು, ಇಡೀ ವೃತ್ತ ಬಂಟಿಂಗ್ಸ್ ಗಳಿಂದ ಆವೃತ್ತವಾಗಿದೆ. ಒಟ್ಟಿನಲ್ಲಿ ಅದ್ಧೂರಿ ಹಿಂದೂ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭರದ ಸಿದ್ಧತೆ ನಡಿತಾ ಇದೆ.